ಭಾಂಧವ್ಯ
✍✍✍ ಶಾರದಾ ಎ.ಅಂಚನ್ , ನವಿ-ಮುಂಬಯಿ
ಏ ರಾಮು,ಪುಸ್ತಕ ಹರಿಯಬೇಡ ಕಣೋ, ಅಪ್ಪಾಜಿ ಅಲ್ಲಿ -ಇಲ್ಲಿ ಸಾಲ ಮಾಡಿ ಪುಸ್ತಕ ತಂದುಕೊಟ್ಟಿದ್ದಾರೆ. ದಮ್ಮಯ್ಯ ಇಲ್ಲಿ ಕೊಡೊ ಪುಸ್ತಕ "ಎನ್ನುತ್ತಾ ,ಇನ್ನೇನು ಪುಸ್ತಕವನ್ನು ಎರಡು ಭಾಗ ಮಾಡಿ ಬಿಡುತ್ತಾನೆ ಎನ್ನುವಷ್ಟರಲ್ಲೇ ಅಣ್ಣ ರಾಮುವಿನ ಕೈಯಲ್ಲಿದ್ದ ತನ್ನ ಪಿ .ಎಚ್ .ಡಿ ಗೆ ಸಂಬಂಧ ಪಟ್ಟ ಪುಸ್ತಕವನ್ನು ಕೊಡುವಂತೆ ಪ್ರಶಾಂತ್ ದೈನ್ಯತೆಯಿಂದ ಕೈ ಮುಗಿಯುತ್ತಾನೆ.ತಮ್ಮನ ಅಸಹಾಯಕತೆ,ಆತಂಕದ ಮುಖ ಕಂಡು ರಾಮುವಿನಲ್ಲಿದ್ದ ಉಗ್ರತೆ ಕಡಿಮೆಯಾಗಿ ಶಾಂತನಾಗುತ್ತಾನೆ . ತುಂಟನಗು ಬೀರುತ್ತಾ ತನ್ನ ಕೈಯಲ್ಲಿದ್ದ ಪುಸ್ತಕವನ್ನು ತಮ್ಮನ ಕೈಗೆ ವರ್ಗಾಯಿಸುತ್ತಾನೆ ಪ್ರಶಾಂತ ಅಣ್ಣನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾ "ಎಲೋ,ಹಾಗೆಲ್ಲ ಮಾಡಬಾರದು ಕಣೋ,ನೀನು ನನ್ನ ಪ್ರೀತಿಯ ಅಣ್ಣ ತಾನೇ ,ನನ್ನ ಪಾಲಿನ ಪುಟ್ಟ ಕಂದ,ನಾನು ಚೆನ್ನಾಗಿ ಓದಿ ಕೆಲಸದಲ್ಲಿ ಪ್ರಮೋಷನ್ ಗಿಟ್ಟಿಸಿಕೊಳ್ಳಬೇಕು,ನಂತರ ನಿನ್ನನ್ನು ಒಳ್ಳೆಯ ಮನೋವೈದ್ಯರಿಗೆ ತೋರಿಸಬೇಕು,ಅದುವೇ ನನ್ನ ಅಸೆ ಕಣೋ,ನೀನೊಬ್ಬನೇ ಈ ಮನೆಯಲ್ಲಿ ನನ್ನ ಆತ್ಮೀಯ,ನೀನೂ ಹೀಗೆ ಸಿಟ್ಟು,ಕೋಪ ಮಾಡಿಕೊಂಡರೆ ಹೇಗೆ ? "ಎಂದು ಹೇಳಿದಾಗ ರಾಮುವಿಗೆ ಎಷ್ಟು ಅರ್ಥವಾಯಿತೋ ,ಬಿಟ್ಟಿತೋ ಆದರೂ ತಪ್ಪಿತಸ್ಥನಂತೆ ಮುಖ ಚಿಕ್ಕದು ಮಾಡುತ್ತಾನೆ.ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ತಮ್ಮನ ಮುಂದೆ ಕಿವಿ ಹಿಡಿಯುತ್ತಾನೆ.ಆಗ ಪ್ರಶಾಂತ್,"ಆಯಿತು,ಈಗ ನನ್ನ ಪ್ರಾಜೆಕ್ಟ್ ಕೆಲಸ ಸ್ವಲ್ಪ ಬಾಕಿ ಇದೆ,ನೀನು ಈ ಪುಸ್ತಕ ಓದುತ್ತ ಕುಳಿತುಕೋ,"ಎನ್ನುತ್ತಾ ಒಂದು ಸಾಮಾನ್ಯ ಜ್ಞಾನದ ಪುಸ್ತಕವನ್ನು ಅವನ ಕೈಯಲ್ಲಿತ್ತು ತನ್ನ ಅಧ್ಯಯನದಲ್ಲಿ ಮಗ್ನನಾದ .
ಮಡಿಕೇರಿಯ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಪ್ರಶಾಂತ್ -ರಾಮು ಅಣ್ಣ-ತಮ್ಮಂದಿರು.ತಂದೆ ಚೆನ್ನಬಸಪ್ಪ-ತಾಯಿ ಶಂಕರಿ.ಇವರಿಗೆ ೫ ಜನ ಮಕ್ಕಳು.ಹಿರಿಯವ ರಾಮು ಆದರೆ ಎರಡೆನೆಯವ ಸುಧೀರ್,ಮೂರನೆಯವ ನಿತಿನ್,ನಾಲ್ಕನೆಯವಳು ನಮಿತಾ ಹಾಗು ಕೊನೆಯವ ಪ್ರಶಾಂತ್.ಚೆನ್ನಬಸಪ್ಪನಿಗೆ ೨-೩ ಎಕರೆ ಜಮೀನು,ತೋಟ ಇದ್ದು ಕೃಷಿ ವ್ಯವಸಾಯ ಮಾಡಿಕೊಂಡು ಅದರಲ್ಲಿ ಬಂಧ ಆದಾಯದಲ್ಲಿ ಮಕ್ಕಳ ಎಲ್ಲ ಆಶೋತ್ತರಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದ.ಹೆಂಡತಿ ಶಂಕರಿ ಶ್ರೀಮಂತ ಕುಟುಂಬದಿಂದ ಬಂದವಳು.ಆಕೆಗೆ ಚೆನ್ನಬಸಪ್ಪನನ್ನು ಮದುವೆಯಾಗಲು ಇಷ್ಟವಿರಲಿಲ್ಲ.ಒಳ್ಳೆಯ ಹುಡುಗ,ಕೃಷಿಕನಾದರೂ ಸುಂದರ ,ಸುಶೀಲ ಹುಡುಗ, ಗುಣ ಹಾಗೂ ನಿಯತ್ತಿನಲ್ಲಿ ಆತನನ್ನು ಮೀರಿಸುವವರು ಆ ಊರಿನಲ್ಲಿ ಯಾರೂ ಎಲ್ಲ ಎಂಬ ಊರವರ ಮಾತುಗಳನ್ನು ಕೇಳಿಕೊಂಡ ಶಂಕರಿಯ ಹೆತ್ತವರು ಅವಳ ಒಪ್ಪಿಗೆಯನ್ನೂ ಕೇಳದೆ ಮದುವೆಯ ದಿನವನ್ನು ನಿರ್ಧರಿಸಿಯೇ ಬಿಟ್ಟಿದ್ದರು.ಬಲವಂತದ ಮದುವೆಯಿಂದಾಗಿ ಶಂಕರಿ ಗಂಡನೊಂದಿಗೆ ಬಹಳ ಒರಟಾಗಿ ನಡೆದುಕೊಳ್ಳುತಿದ್ದಳು. ಮಾತು ಮಾತಿಗೂ ಸಿಡಿಮಿಡಿ ಗೊಳ್ಳುತ್ತಾ,ಸಣ್ಣ -ಪುಟ್ಟ ವಿಷಯಗಳಿಗೆಲ್ಲ ತಾಯಿಮನೆ ಸೇರಿ ಮನೆಯ ವಾತಾವರಣವನ್ನು ಅಸ್ತವ್ಯಸ್ತ ಪಡಿಸುವ ಹೆಂಡತಿಯಿಂದಾಗಿ ಚೆನ್ನಬಸಪ್ಪ ಬಹಳ ನೊಂದುಕೊಂಡರೂ ,ಶ್ರೀಮಂತ ಮನೆಯ ಹುಡುಗಿ ,ಕಷ್ಟ- ಸುಖದ ಅರಿವಿರದವಳು ಎಂದುಕೊಂಡು ಆಕೆಯೊಂದಿಗೆ ಸಮಾಧಾನದಿಂದ ಇರಲು ಬಹಳಷ್ಟು ಹೆಣಗಾಡುತ್ತಿದ್ದ.ಚಿಕ್ಕಂದಿನಿಂದಲೂ ಬಡತನವನ್ನೇ ಕಂಡು, ನೋವು-ನಲಿವುಗಳನ್ನು ಕಂಡವನಾದ್ದರಿಂದ, ಬದುಕಿನ ಏರಿಳಿತಗಳನ್ನು ಯಾವ ರೀತಿ ಹೊಂದಾಣಿಸಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದ ಚೆನ್ನಬಸಪ್ಪ.
ಈ ರೀತಿ ಚೆನ್ನಬಸಪ್ಪ -ಶಂಕರಿಯ ಸಂಸಾರ ಸರಸ ವಿರಸಗಳೊಂದಿಗೆ ಮುನ್ನಡೆಯುತಿದ್ದಾಗ ಇವರಿಗೆ ಒಂದರ ಮೇಲೊಂದರಂತೆ ಐವರು ಮಕ್ಕಳಾದರು .ಮಕ್ಕಳ ಲಾಲನೆ -ಪಾಲನೆ ಹೆಚ್ಚುತ್ತಾ ಹೋದಂತೆ ಶಂಕರಿಯ ದುಡುಕು -ಅಸಮಾಧಾನಗಳು ಕಡಿಮೆಯಾಗುತ್ತ ಬಂದಿದ್ದವು.ಅದಲ್ಲದೆ ತುಂಬಾ ಸಾದು ಸ್ವಭಾವದ ಮನುಷ್ಯನಾದ ಚೆನ್ನಬಸಪ್ಪನ ಒಳ್ಳೆಯ ಸ್ವಭಾವದಿಂದಾಗಿ ವರುಷಗಳು ಕಳೆದಂತೆ ಆಕೆ ಆತನನ್ನು ಗೌರವಿಸುವುದನ್ನು ಕೂಡ ಕಲಿತುಕೊಂಡಿದ್ದಳು.
ಚೆನ್ನಬಸಪ್ಪ ಮಕ್ಕಳಿಗೆ ಒಳ್ಳೆಯ ವಿದ್ಯಾಭಾಸ ಕೊಡಿಸಲು ಬಹಳಷ್ಟು ಪ್ರಯತ್ನಿಸುತಿದ್ದ.ಹಿರಿಯ ಮಗ ರಾಮು ಮಾತ್ರ ೧೨ ನೇ ತರಗತಿಯಲ್ಲಿ ಓದುತ್ತಿದ್ದಾಗ ,ಅದೊಂದು ದಿನ ಶಾಲೆಯಿಂದ ಮನೆಗೆ ವಾಪಸ್ಸು ಬರುತ್ತಿರಲು ವಾಹನವೊಂದು ಅವನಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿತ್ತು.ತಲೆಗೆ ಪೆಟ್ಟಾಗಿ ರಕ್ತ ಒಸರುತ್ತ ಬಿದ್ದ ರಾಮುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಅವನ ತಲೆಗೆ ಸ್ವಲ್ಪ ಜಾಸ್ತಿಯೇ ಪೆಟ್ಟಾದ್ದರಿಂದ ಆತನ ಮೆದುಳಿನ ನರಮಂಡಲದ ವ್ಯವಸ್ಥೆಯಲ್ಲಿ ಏರು ಪೇರಾಗಿ ಜೀವಕ್ಕೆ ಏನೂ ಅಪಾಯವಾಗದಿದ್ದರೂ ರಾಮುವಿನ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಾಗಿತ್ತು.ಅವನು ಶೇಖಡಾ ೭೦ ರಷ್ಟು ನೆನಪಿನ ಶಕ್ತಿ ಕಳಕೊಂಡಿದ್ದ .ಅವನನ್ನು ಪರೀಕ್ಷಿಸಿದ ವೈದ್ಯರು "ರಾಮುವಿನ ಮೆದುಳಿನ ನರವೊಂದು ಕಾರ್ಯ ಸ್ಥಗಿತಗೊಳಿಸಿದೆ .ಅದನ್ನು ಸರಿಪಡಿಸಬೇಕಾದರೆ ಆಪರೇಷನ್ ಮಾಡಬೇಕು.ಅದಕ್ಕೆ ಲಕ್ಷಗಟ್ಟಲೆ ಖರ್ಚಾಗುತ್ತದೆ.ಆದರೂ ಸಂಪೂರ್ಣ ಸರಿಹೊಂದುವನೆಂಬ ಭರವಸೆಯಿಲ್ಲ."ಎಂದಾಗ ಚೆನ್ನಬಸಪ್ಪ ಮುಖ ಸಪ್ಪಗೆ ಮಾಡಿ ರಾಮುವನ್ನು ಮನೆಗೆ ವಾಪಸ್ಸು ಕರೆತಂದಿದ್ದ.ಆದದ್ದಾಗಲಿ ಕೈಯಲ್ಲಿ ಹಣವಾದಾಗ ರಾಮುವಿನ ಬಗ್ಗೆ ಯೋಚಿಸುವ ಎಂದುಕೊಂಡು ಬಾಕಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿದ್ದ .
ಮಕ್ಕಳು ಬೆಳೆಯುತ್ತಿದ್ದರು .ರಾತ್ರಿ ಹಗಲೆನ್ನದೆ ದುಡಿದು ಮಕ್ಕಳನ್ನು ಒಂದು ಹಂತಕ್ಕೆ ತಲುಪಿಸುವುದರಲ್ಲಿ ಚೆನ್ನಬಸಪ್ಪ ಸಫಲನಾಗಿದ್ದ.ಎರಡನೆಯ ಮಗ ಸುಧೀರ್ ಬಿ.ಎಡ್ ಮುಗಿಸಿ ಶಾಲೆಯೊಂದರಲ್ಲಿ ಶಿಕ್ಷಕನಾದ, ಆದರೆ ಮಾನಸಿಕ ಅಸ್ವಸ್ಥನಾಗಿದ್ದ ಹಿರಿಯ ಸಹೋದರ ರಾಮುವಿನ ಕಿರಿ ಕಿರಿ ತಾಳಲಾಗದ ಸುಧೀರ್ ಮಧುವೆಯ ನಂತರ ಬೇರೆ ಮನೆಯೊಂದನ್ನು ಖರೀದಿಸಿ ಏನೂ ತಕರಾರು ಬೇಡವೆಂದು ಹೆಂಡತಿಯೊಂದಿಗೆ ಬೇರೆ ಸಂಸಾರ ಬೇರೆ ಹೂಡಿದ್ದ .ಮೂರನೇಯವನಾದ ನಿತಿನ್ ಇಂಜೀನೀಯರಿಂಗ್ ಮುಗಿಸಿ ದೂರದ ಹೈದರಾಬಾದ್ ನಲ್ಲಿ ಸಾಫ್ಟ್ ವೇರ್ ಇಂಜೀನಿಯರ್ ಕೆಲಸ ಗಿಟ್ಟಿಸಿಕೊಂಡು ಅಲ್ಲೇ ನೆಲೆ ನಿಂತ .ಮಗಳು ನಮಿತಾ ಮಾತ್ರ ತಾಯಿಯ ಗತ್ತು,ಸಿಡಿಮಿಡಿ ಎಲ್ಲವನ್ನು ರಕ್ತಗತವಾಗಿ ಮೈಗೂಡಿಸಿ ಕೊಂಡು ಬಂದವಳು.ವಿದ್ಯಾಭ್ಯಾಸವೂ ಅಷ್ಟಾಗಿ ಅವಳ ತಲೆಗೆ ಹೋಗದೆ ಹಾಗೂ ಹೀಗೂ ಹೈಯೆರ್ ಸೆಕೆಂಡರಿ ಮುಗಿಸಿ ನಂತರ ಮನೆಯಲ್ಲೇ ಇದ್ದಳು.ರಾಮು ಮಾನಸಿಕ ರೋಗಿಯಾಗಿ ಪರಿವರ್ತನೆ ಗೊಂಡ ಮೇಲೆ ಆತನನ್ನು ಕಂಡು ಅವಳ ಸಿಡುಕು ಜಾಸ್ತಿಯಾಗಿತ್ತು.ಅಣ್ಣನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂಬ ಪರಿವೆ ಅವಳಿಗೆ ಇರಲಿಲ್ಲ. ಹಾಗಾಗಿ ನಮಿತಾಳನ್ನು ಕಂಡಾಕ್ಷಣ ರಾಮುವಿನ ಸಿಟ್ಟು ಜಾಸ್ತಿಯಾಗುತಿತ್ತು. ಚೆನ್ನಬಸಪ್ಪನಿಗೆ ಇದರಿಂದ ತಲೆಬಿಸಿಯಾಗಿ ಮಗಳಿಗೊಂದು ಮದುವೆ ಮಾಡಿಬಿಡಬೇಕೆಂದು ಯೋಚಿಸಿ ಆಕೆಗೆ ಸೂಕ್ತ ವರ ನೋಡಲೂ ಪ್ರಾರಂಭಿಸಿದ್ದ.ಸ್ವಲ್ಪ ಸಮಯದಲ್ಲೇ ಆಕೆಗೆ ಅನುರೂಪನಾದ ಹುಡುಗನೊಬ್ಬನನ್ನು ಹುಡುಕಿ ಮದುವೆ ಕೂಡ ಮಾಡಿಕೊಟ್ಟು ಇನ್ನಾದರೂ ಸಮಾಧಾನದಿಂದ ಇರುತ್ತೇನೆ ಎಂದುಕೊಂಡು ಆತ ನಿರಾಳ ಉಸಿರು ಬಿಟ್ಟಿದ್ದ .ತಾಯಿ ಶಂಕರಿಗೆ ಕೂಡ ರಾಮುವಿನ ವರ್ತನೆ ,ನಡವಳಿಕೆ ಸರಿ ಬೀಳದೆ "ನಾನೇನು ಕರ್ಮ ಮಾಡಿದ್ದೇನೋ ,ಇವನೊಬ್ಬ ಹೀಗಾದ,ಸಾಯುವವರೆಗೆ ಇನ್ನೇನೇನು ಕಷ್ಟ ಪಡಬೇಕೋ ಈತನಿಂದ " ಎಂದು ಬಡಬಡಿಸುತ್ತಿದ್ದಳು. ಮಗನ ನ್ಯೂನ್ಯತೆಯನ್ನು ಸರಿಪಡಿಸುವ ಪ್ರಯತ್ನ ಮಾಡದೇ,ಆತನನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಬದಲು ,ಆದಷ್ಟು ಆತನ ಕಣ್ಣೆದುರಿನಿಂದ ದೂರ ಇರಲು ಪ್ರಯತ್ನಿಸುತಿದ್ದಳು. ಪತಿ ಮತ್ತು ಕೊನೆಯ ಮಗನಿಗೇ ರಾಮುವಿನ ಬೇಕು ಬೇಡಗಳನ್ನು ಪೂರೈಸಲು ಒತ್ತಾಯ ಹೇರುತ್ತಿದ್ದಳು. ಶ್ರೀಮಂತಿಕೆಯಿಂದ ಬೆಳೆದ ಶಂಕರಿಗೆ ಟೆನ್ಶನ್ ,ಹಾರಾಟ -ಚೀರಾಟ ಇವೆಲ್ಲ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ, ಹಾಗಾಗಿ ಆಕೆ ರಾಮುವಿಗೆ ತಾಯಿಯ ಪ್ರೀತಿ ನೀಡಲೂ ಇಲ್ಲ,.ರಾಮುವಿನಲ್ಲೂ ತಾಯಿ ಎಂಬ ಮಮಕಾರ ಮೂಡಿರಲೂ ಇಲ್ಲ . ಕೊನೆಗೆ ಉಳಿದವನು ಪ್ರಶಾಂತ್. ಅಣ್ಣನನ್ನು ಆತ್ಮೀಯತೆಯಿಂದ ನೋಡಿಕೊಂಡು ಅವನ ಅನುಚಿತ ವರ್ತನೆಯನ್ನು ಸಹಿಸಿಕೊಂಡು ,ಆತನನ್ನು ಸಮಾಧಾನವಾಗಿ ಇಡಲು ಪ್ರಯತ್ನಿಸುತಿದ್ದವ ಪ್ರಶಾಂತ್ ಮಾತ್ರ. ಪ್ರಶಾಂತ್ -ರಾಮು ಚಿಕ್ಕಂದಿನಿಂದಲೂ ಬಹಳ ಆತ್ಮೀಯತೆಯಿಂದ ಇದ್ದವರು.ಸಣ್ಣಂದಿನಲ್ಲಿ ಶಾಲೆಗೆ ಹೋಗುವಾಗ ಸಣ್ಣ ತಮ್ಮ ಎನ್ನುವ ಮಮತೆಯಿಂದ ರಾಮುವೆ ಆತನ ಕೈ ಹಿಡಿದು ಶಾಲೆಗೆ ಕರೆದುಕೊಂಡು ಹೋಗುತಿದ್ದ. ಹೋಗುವ ದಾರಿಯಲ್ಲಿ ಅಂಗಡಿ ಎದುರಾದಾಗ ತಮ್ಮನಿಗೆ ಚಾಕಲೇಟು,ಪೆಪ್ಪರ್ ಮೆಂಟ್ ತೆಗೆಸಿ ಕೊಡುತಿದ್ದ ,ಪ್ರಶಾಂತ್ ಕೂಡ ಅಷ್ಟೇ,ತನಗೆ ಪೆನ್ಸಿಲ್ ರಬ್ಬರ್, ಬಳಪ ಏನಾದರೂ ಬೇಕಿದ್ದರೆ ಬೇರೆ ಸಹೋದರರಲ್ಲಿ ಕೇಳದೆ ರಾಮುವಿನಲ್ಲಿ ಮಾತ್ರ ಕೇಳುತಿದ್ದ, ಹೀಗಾಗಿ ಇವರಿಬ್ಬರ ಅನ್ಯೋನ್ಯತೆ ಚಿಕ್ಕಂದಿನಿಂದಲೇ ಮೊಳೆತು ಬಂದಿತ್ತು. ರಾಮು ಮಾನಸಿಕ ಅಸ್ವಸ್ಥನಾದಾಗ ಪ್ರಶಾಂತ್ ಅವನನ್ನು ಕಡೆಗಾಣಿಸದೆ ಆತನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ .ಇತರ ಸಹೋದರರು ಹಾಗೂ ಸಹೋದರಿ ಆತನ ಹುಚ್ಚು ವರ್ತನೆಯಿಂದ ಸಿಟ್ಟು,ಕೋಪ ಮಾಡಿಕೊಂಡರೂ ಪ್ರಶಾಂತ್ ಮಾತ್ರ ಆತನನ್ನು ಸಮಾಧಾನಿಸುತ್ತ,ಬಹಳ ತಾಳ್ಮೆಯಿಂದ ರಾಮುವಿನೊಂದಿಗೆ ವರ್ತಿಸುತ್ತಿದ್ದ.ಹೀಗಾಗಿ ರಾಮು ಪ್ರಶಾಂತ್ ನೊಂದಿಗೆ ಇರುವಾಗ ಬಹಳ ಸೌಮ್ಯವಾಗಿರುತಿದ್ದ .ಆತ ತನ್ನ M.SC ವಿದ್ಯಾಭ್ಯಾಸ ಮುಗಿಸಿ ಇಸ್ರೋ ಕಂಪನಿಯಲ್ಲಿ ರೀಸರ್ಚ್ ಲ್ಯಾಬೋರೇಟರಿಯ ಸಹಾಯಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಪಿ.ಎಚ್ .ಡಿ ಮಾಡಬೇಕೆಂಬುದು ಆತನ ಕನಸಾಗಿತ್ತು .ಪಿ.ಚ್ .ಡಿ ಮುಗಿಸಿದರೆ ತನ್ನ ಕಂಪನಿ ಯಲ್ಲಿ ಪ್ರಮೋಷನ್ ಸಿಗುವ ಅವಕಾಶ ಅವನಿಗಿದ್ದುದರಿಂದ ಪಿ.ಚ್.ಡಿ ಯ ಕೆಲಸ ಕೂಡ ಶುರು ಮಾಡಿದ್ದ .ತನಗೆ ಪ್ರಮೋಷನ್ ಸಿಕ್ಕಿ ತನ್ನ ವೇತನ ಹೆಚ್ಚಾದರೇ ತನ್ನ ಸಹೋದರನನ್ನು ಒಳ್ಳೆಯ ಮಾನಸಿಕ ತಜ್ಞರಿಗೆ ತೋರಿಸಬೇಕೆಂಬುದು ಪ್ರಶಾಂತ್ ನ ಯೋಚನೆಯಾಗಿತ್ತು . ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಚೆನ್ನಬಸಪ್ಪ ಕೂಡ ಒತ್ತು ಕೊಟ್ಟಿದ್ದ .ಅವನಿಗೆ ಬೇಕಾದ ಪಿ.ಚ್.ಡಿ ಗ್ರಂಥ ಖರೀದಿಸಲು ಹಣದ ಸಹಾಯ ಕೂಡ ಮಾಡುತಿದ್ದ.ತನ್ನ ೫ ಮಕ್ಕಳಲ್ಲಿ ಪ್ರಶಾಂತ್ ಒಬ್ಬನೇ ತನ್ನ ಸುಖ ಕಷ್ಟದಲ್ಲಿ ಭಾಗಿಯಾಗುವವ ಎಂದು ಚೆನ್ನಬಸಪ್ಪನಿಗೆ ಗೊತ್ತಿತ್ತು. ಮಾನಸಿಕ ರೋಗಿಯಾಗಿರುವ ಅಣ್ಣನ ಕಾಳಜಿ ಕೂಡ ಆತ ತೆಗೆದುಕೊಳ್ಳುತ್ತಿರುವುದನ್ನು ಕಂಡು ಚೆನ್ನಬಸಪ್ಪ ಮಗನ ಬಗ್ಗೆ ಬಹಳ ಹೆಮ್ಮೆಯಿಂದಿದ್ದ.
ಚೆನ್ನಬಸಪ್ಪ ಹಾಗು ಪ್ರಶಾಂತ್ ರಾಮುವನ್ನು ಒಳ್ಳೆಯ ವೈದ್ಯರಿಗೆ ತೋರಿಸಿ ಆತನನ್ನು ಒಬ್ಬ ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಡಿದ್ದರು . ಪ್ರಶಾಂತ್ ನ ಉನ್ನತ ವಿದ್ಯಾಭ್ಯಾಸದ ಗುರಿಯೇ ರಾಮುನ ಚಿಕಿತ್ಸೆ ಗಾಗಿ ಹಣ ಹೊಂದಿಸುವುದಾಗಿತ್ತು..ಒಂದು ವೇಳೆ ರಾಮು ಸಾಮಾನ್ಯ ಮನುಷ್ಯನಾದರೆ ಮಾತ್ರ ತಾನು ಮದುವೆಯಾಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂಬ ದೃಢ ನಿರ್ಧಾರವನ್ನು ಕೂಡಾ ಹೊಂದಿದ್ದ ಪ್ರಶಾಂತ್.ಯಾಕೆಂದರೆ ತಾನು ಮದುವೆಯಾದರೆ ರಾಮುವನ್ನು ನೋಡಿಕೊಳ್ಳುವ ಸಮಸ್ಯೆಯಾಗಬಹುದು, ತನ್ನ ಮಡದಿಯಾಗಿ ಬಂದವಳಿಗೆ ಆತನ ವರ್ತನೆಯೊಂದಿಗೆ ಹೊಂದಿಕೊಳ್ಳಲು ಕಷ್ಟವಾದರೆ ಮತ್ತೆ ನಾಲ್ಕು ಸುತ್ತಲೂ ಅಸಮಾಧಾನ,ಹೀಗಾಗಿ ಈ ಜಂಜಾಟವೇ ಬೇಡ ಎಂಬುದು ಪ್ರಶಾಂತ್ ನ ನಿಲುವಾಗಿತ್ತು.ತಾನು ಮದುವೆಯಾಗಿ ಸಂಸಾರ ಮಕ್ಕಳು ಎಂದು ಬ್ಯುಸಿ ಯಾದರೆ ಜೀವನ ಪರ್ಯಂತ ಅಣ್ಣನನ್ನು ನೋಡಿಕೊಳ್ಳುವರು ಯಾರು? ಎಂಬುದೂ ಆತನ ಯೋಚನೆಯಾಗಿತ್ತು.ಹೀಗಾಗಿ ಮೊದಲು ಪಿ.ಚ್.ಡಿ ಮುಗಿಸಿ ಪ್ರಮೋಷನ್ ಪಡೆಯಬೇಕು ನಂತರ ಆತನನ್ನು ಒಳ್ಳೆಯ ಮನೋವೈದ್ಯರಿಗೆ ತೋರಿಸುವುದು ಎಂದು ನಿರ್ಧರಿಸಿ ತನ್ನ ಉದ್ಯೋಗದ ಜೊತೆಗೆ ಸತತ ಅಧ್ಯಯನದಲ್ಲಿ ನಿರತನಾಗಿದ್ದ . ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದ ರಾಮು ,ಪ್ರಶಾಂತ್ ತಯಾರು ಮಾಡಿದ್ದ ಪ್ರಾಜೆಕ್ಟ್ ನ ಪ್ರತಿಗಳನ್ನು ಹರಿದು ಹಾಕಿ ಜೋರಾಗಿ ನಗುತಿದ್ದರೂ ಆತನ ಸಹನೆಯ ಕಟ್ಟೆ ಒಡೆದಿರಲಿಲ್ಲ.ಸಹೋದರನಲ್ಲಿ ,ಪ್ರೀತಿಯಿಂದ ಸಮಾಧಾನದಿಂದ ಮಾತಾಡಿ ಅವನನ್ನು ಶಾಂತ ಗೊಳಿಸುತಿದ್ದ.
ದಿನಗಳು ಉರುಳುತ್ತಿದ್ದವು. ಪ್ರಶಾಂತ್ ನ ಪಿ.ಚ್. ಡಿ ಕೆಲಸ ತ್ವರಿತ ವಾಗಿ ನಡೆಯುತಿತ್ತು.ಅವನ ತೀವ್ರ ಶ್ರಮದ ಪರಿಣಾಮವಾಗಿ ಅವನ ಅಧ್ಯಯನದ ಕೆಲಸ ಒಂದೆರಡು ವರುಷಗಳಲ್ಲಿ ಮುಗಿದು ಆತ ತನ್ನ ಡಿಗ್ರಿ ಕೂಡ ಪಡೆದುಕೊಂಡ .ತನ್ನ ಡಿಗ್ರಿ ಸರ್ಟಿಫಿಕೇಟ್ ನ್ನು ಕಂಪನಿಗೆ ಒಪ್ಪಿಸಿದ ಕೆಲವು ದಿನಗಳಲ್ಲಿಯೇ ಪ್ರಶಾಂತ್ ಇಸ್ರೋ ಕಂಪನಿ ಯ ಸಂಶೋಧನಾ ವಿಭಾಗದ ಪ್ರೊಫೆಸರ್ ಆಗಿ ನೇಮಕಗೊಂಡ . .ಅವನ ವೇತನ ಕೂಡ ದ್ವಿಗುಣ ಗೊಂಡಿತ್ತು.ಸಂತೋಷಗೊಂಡ ಪ್ರಶಾಂತ್ ತನ್ನ ತಂದೆಯ ಒಪ್ಪಿಗೆ ಪಡೆದು ತನ್ನ ಸಹೋದರನನ್ನು ಖ್ಯಾತ ಮನೋವೈದ್ಯರಿಗೆ ತೋರಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಾನೆ, ವೈದ್ಯರನ್ನು ಭೇಟಿಯಾಗಿ ತನ್ನ ಸಹೋದರ ನ ಸಮಸ್ಯೆಯ ಬಗ್ಗೆ ಹೇಳಿ ಆತ ಮೊದಲಿನಂತಾಗುವುದಿದ್ದರೆ ಎಷ್ಟು ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದಾಗ ವೈದ್ಯರು "ಮೊದಲು ಆತನನ್ನು ಸಂಪೂರ್ಣ ಪರಿಶೀಲಿಸಿ ,ಆತನ ನರಮಂಡಲದ ನ್ಯೂನ್ಯತೆಯೇನು,ಅವನನ್ನು ಕೇವಲ ಮಾನಸಿಕ ಚಿಕೆತ್ಸೆಯಿಂದಲೇ ಸರಿಪಡಿಸಬಹುದೇ ಅಥವಾ ಸರ್ಜರಿ ಏನಾದರೂ ಮಾಡಬೇಕಾದೀತೇ ಎಂಬುದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ,ಆಪರೇಷನ್ ಆಗಬೇಕಾದರೆ ನಿಮ್ಮ ಒಪ್ಪಿಗೆಯ ನಂತರ ವೇ ಮಾಡುತ್ತೇವೆ,ಆ ನಂತರ ಆತ ಸಂಪೂರ್ಣ ನಾರ್ಮಲ್ ಮನುಷ್ಯನಾಗುತ್ತಾನೋ ಇಲ್ಲವೋ ಎಂಬುದರ ನಿರ್ಧಾರಕ್ಕೆ ಬರುತ್ತೇವೆ,ಏನಿದ್ದರೂ ಆತ ಆಸ್ಪತ್ರೆಯಲ್ಲಿ ಎರಡು ಮೂರು ತಿಂಗಳು ಇರಬೇಕಾಗಬಹುದು ಎಂದಾಗ ಪ್ರಶಾಂತ್ ಹಾಗೂ ಚೆನ್ನಬಸಪ್ಪ ಎಲ್ಲದಕ್ಕೂ ಸೈ ಎನ್ನುತ್ತಾ ಅವನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿ ಬಂದಿದ್ದರು.ಆಸ್ಪತ್ರೆಯಲ್ಲಿ ಅವನನ್ನು ಬಿಟ್ಟು ಬರುವಾಗ ರಾಮು ತಮ್ಮನತ್ತ ಕೈಬೀಸಿ "ಏಯ್ ಪಚ್ಚು ಎಲ್ಲಿಗೆ ಹೋಗ್ತಿದ್ದೀಯೋ ನನ್ನನ್ನು ಬಿಟ್ಟು" ಎನ್ನುತ್ತಾ ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ಅತ್ತಾಗ ಪ್ರಶಾಂತ್ ಅಣ್ಣನನ್ನು ಅಪ್ಪಿ ತಬ್ಬಿಕೊಳ್ಳುತ್ತಾ "ನೀನು ನನ್ನ ಹಾಗೆ ಜಂಟಲ್ ಮೆನ್ ಆಗಬೇಕು ತಾನೇ,ನಂತರ ನಿನಗೂ ಮದುವೆ ಮಾಡಿಸುತ್ತೇನೆ,ನಾನು ಮದುವೆ ಆಗುತ್ತೇನೆ ,ನನಗೂ ಅತ್ತಿಗೆ ಬರುತ್ತಾಳೆ,ನಿನಗೂ ಅತ್ತಿಗೆ ಬರುತ್ತಾಳೆ" ಎಂದು ಅವನನ್ನು ಸಂತೈಸಿ ಅಲ್ಲಿಯೇ ಬಿಟ್ಟು ಬರುವಾಗ ಪ್ರಶಾಂತ್ ಹಾಗೂ ಚೆನ್ನಬಸಪ್ಪನಿಗೆ ಬಹಳ ದುಃಖವಾದರೂ ಅದನ್ನು ತೋರಿಸಿಕೊಳ್ಳದೆ ಭಾರವಾದ ಹೃದಯದಿಂದ ಮನೆಯತ್ತ ಕಾಲು ಹಾಕಿದ್ದರು.ಮನೆಗೆ ಬಂದ ಚೆನ್ನಬಸಪ್ಪ ಪ್ರಶಾಂತ್ ನನ್ನುಅಪ್ಪಿಕೊಂಡು ಮಗನೆ "ನಿನ್ನಂತಹವನಿಗೆ ಅಪ್ಪನಾದುದು ನನ್ನ ಪುಣ್ಯ,ಯಾರಿಗೂ ಬೇಡವಾದ ಸಹೋದರನನ್ನು ಸರಿಮಾಡಲು ಅದೆಷ್ಟು ಪ್ರಯತ್ನಪಡುತ್ತಿದ್ದೀಯ,ತನ್ನ ಸ್ವಂತ ಸುಖವನ್ನೇ ಮರೆತು ಆತನ ಭವಿಷ್ಯಕ್ಕಾಗಿ ನಿನ್ನ ಖುಷಿಯನ್ನೆಲ್ಲ ಬದಿಗಿಟ್ಟು ಹೋರಾಡುತ್ತಿದ್ದೀಯ,ನೀನೇ ನಿಜವಾದ ಮಗ "ಎಂದು ಹೆಮ್ಮೆಯಿಂದ ಹೇಳಿದಾಗ ಪ್ರಶಾಂತ್ ಪ್ರಶಾಂತ ಮುಖದಿದಿಂದ ತಂದೆಯತ್ತ ನೋಡಿ ನಕ್ಕಿದ್ದ,
ರಾಮುವಿನ ಚಿಕೆತ್ಸೆ ನಡೆಯುತಿತ್ತು.ಈ ನಡುವೆ ವೈದ್ಯರು ಚನ್ನಬಸಪ್ಪ ಮತ್ತು ಪ್ರಶಾಂತ್ ನನ್ನು ಕರೆದು ರಾಮುವಿನ ಮೆದುಳಿನ ನರವೊಂದರಲ್ಲಿ ಸಮಸ್ಯೆ ಕಾಣುತ್ತಿರುವುದರಿಂದ ಅದರ ಶಸ್ತಚಿಕಿತ್ಸೆಯಯಾಗಬೇಕು ,ಸ್ವಲ್ಪ ಹೆಚ್ಚಿಗೆಯೇ ಹಣ ಖರ್ಚಾಗಬಹುದು ,ನಂತರ ಆತನ ಮಾನಸಿಕ ಸ್ಥಿತಿ ಸರಿಯಾಗುತ್ತದೆಯೋ ನೋಡೋಣ ಎಂದಾಗ ತಂದೆ ಮಗ ಇಬ್ಬರೂ 'ಆಯಿತು ಡಾಕ್ಟರ್,ಹಣ ಹೇಗಾದರೂ ಹೊಂದಿಸುತ್ತೇವೆ ,ಆತ ಒಬ್ಬ ಸಾಮಾನ್ಯ ಮನುಷ್ಯನಾದರೆ ಅಷ್ಟೇ ಸಾಕು ನಮಗೆ" ಎಂದು ಒಪ್ಪಿಗೆ ಕೊಟ್ಟರು .ನುರಿತ ವೈದ್ಯರೊಬ್ಬರನ್ನು ಹೊರಗಿನಿಂದ ಕರೆಸಿ ರಾಮುವಿನ ಆಪರೇಷನ್ ಮಾಡಿಸಲಾಯಿತು.ಸುಮಾರು ಒಂದು ತಿಂಗಳ ತನಕ ಕೋಮಾ ದಲ್ಲಿದ್ದ ರಾಮು ನಂತರ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳಲಾರಂಭಿಸಿದ್ದ .ವೈದ್ಯರು ಆತನ ಮಾನಸಿಕ ಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಶೀಲಿಸುತ್ತಾ ಇದ್ದರು.ಹೀಗೆ ಸುಮಾರು ೬ ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ರಾಮು ನಾರ್ಮಲ್ ಸ್ಥಿತಿಗೆ ಬಂದು ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ನಡೆದ ಎಲ್ಲ ವಿಚಾರಗಳನ್ನು ಹೇಳಿಕೊಂಡ. ಆತ ಸಾಮಾನ್ಯ ಸ್ಥಿತಿಗೆ ಬಂದುದನ್ನು ಖಾತ್ರಿ ಪಡಿಸಿಕೊಂಡ ಮೇಲೆಯೇ ವೈದ್ಯರು ಆತನ ತಂದೆ ಮತ್ತು ಸಹೋದರನನ್ನು ಕರೆಸಿ "ರಾಮು ಈಗ ಎಲ್ಲರಂತೆ ಸಾಮಾನ್ಯವಾಗಿ ವರ್ತಿಸುತ್ತಿದ್ದಾನೆ,ಆದ ಅಫಘಾತದ ನೆನಪೂ ಕೂಡ ಆತನಿಗೆ ಈಗ ಇದೆ.ಆತನ ನೆನಪು ಶಕ್ತಿ ಬಂದನಂತರ ಆತ ಮೊದಲು ಕೇಳಿದ್ದು ತಮ್ಮ ಪ್ರಶಾಂತ್ ನನ್ನು ,ನಂತರ ತಂದೆಯನ್ನು,"ಎಂದಾಗ ಪ್ರಶಾಂತ್ ಹಾಗು ಚೆನ್ನಬಸಪ್ಪನ ಕಣ್ಣು ತುಂಬಿ ಬಂದಿತ್ತು.ಅವರು ಬಹಳ ಅವಸರವಸರವಾಗಿ ರಾಮುವನ್ನು ನೋಡಲೆಂದು ಆತನಿದ್ದ ರೂಮಿಗೆ ಓಡಿದರು . ತಮ್ಮ ಮತ್ತು ತಂದೆಯನ್ನು ನೋಡಿದ ರಾಮುವಿನ ಕಣ್ಣು ತುಂಬಿ ಬಂದಿತ್ತು.ಇಬ್ಬರೂ ಹೋಗಿ ರಾಮುವನ್ನು ಅಪ್ಪಿಕೊಂಡರು. ಅಫಘಾತವಾದ ನಂತರದ ಇಷ್ಟು ದಿನಗಳ ಬಗ್ಗೆ ಯಾವುದೂ ಸರಿಯಾಗಿ ನೆನಪಿಲ್ಲ ಎಂದು ಹೇಳಿಕೊಂಡ ರಾಮು ಅಂದು ಯಾವ ರೀತಿ ಅಫಘಾತವಾಯಿತೆಂಬುದನ್ನೂ ವಿವರಿಸುತ್ತಾನೆ .ಈಗ ತನಗೆಲ್ಲವೂ ನೆನಪಾಯಿತು ಎಂದು ಸಂತೋಷ ಕೂಡ ಪಡುತ್ತಾನೆ.ತಂದೆ ಚೆನ್ನಬಸಪ್ಪ ರಾಮುವನ್ನು ನೋಡಿ ಸಂತೋಷದ ಕಣ್ಣೀರು ಸುರಿಸುತ್ತ "ನೋಡು ರಾಮು ಇದೆಲ್ಲ ಪ್ರಶಾಂತ್ ನಿಂದಾಗಿ ಸಾಧ್ಯವಾಯಿತು.ಅವನಂತಹ ತಮ್ಮನನ್ನು ಪಡೆದ ನೀನು ಪುಣ್ಯಾತ್ಮ,ನಿನ್ನನ್ನು ಸಾಮಾನ್ಯ ಸ್ಥಿತಿಗೆ ತರಲು ಈತ ತನ್ನ ಬದುಕನ್ನೇ ಪಣವಿಟ್ಟ,ನಿನ್ನನ್ನು ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಮದುವೆಗೆ ಕೂಡ ಒಪ್ಪದೇ ಬ್ರಹ್ಮಚಾರಿಯಾಗಿ ಉಳಿಯುವ ನಿರ್ಧಾರಕ್ಕೆ ಕೂಡ ಬಂದಿದ್ದ .ಜೊತೆಗೆ ನಿನ್ನ ಚಿಕಿತ್ಸೆ ಮಾಡಬೇಕೆಂಬ ಉದ್ದೇಶದಿಂದ ಪಿ.ಚ್.ಡಿ ಪಡೆದು ಉನ್ನತ ಪದವಿಗೇರಿ ,ಪ್ರಮೋಷನ್ ಪಡೆದುಕೊಂಡ,ಆ ಮೂಲಕ ಗಳಿಸಿದ ಹಣವನ್ನು ನಿನ್ನ ಚಿಕೆತ್ಸೆಗೆ ಉಪಯೋಗಿಸುತ್ತ ಇದ್ದಾನೆ.ನೀವು ಅಣ್ಣತಮ್ಮಂದಿರು ಜೀವನ ಪರ್ಯಂತ ಒಬ್ಬರನೊಬ್ಬರು ಆಧರಿಸಿಕೊಂಡು ರಾಮ ಲಕ್ಷ್ಮಣರಂತೆ ಇರಬೇಕು ಬೇಕು ಎಂದು ತನ್ನಿಬ್ಬರು ಗಂಡು ಮಕ್ಕಳನ್ನು ಆಲಂಗಿಸಿಕೊಂಡ ಚೆನ್ನಬಸಪ್ಪ.ರಾಮು ತಮ್ಮ ಪ್ರಶಾಂತನ ಕೈಯನ್ನು ಕಣ್ಣಿಗೊತ್ತಿಕೊಂಡು "ನೀನು ನನ್ನ ಪಾಲಿನ ದೇವರು,ನನಗೆ ಪುನರ್ಜನ್ಮ ಕೊಟ್ಟಿದ್ದೀಯ,ಈ ನಿನ್ನ ಋಣವನ್ನು ತೀರಿಸಲು ನಾನು ಅಸಮರ್ಥ,ಆದರೂ ನಾನು ಇನ್ನು ಮುಂದೆಯೂ ಖುಷಿಯಾಗಿರಬೇಕೆಂದರೆ ನೀನು ಆದಷ್ಟು ಬೇಗ ಮದುವೆಯಾಗಬೇಕು.ಈಗಾಗಲೇ ೩೫ ವರುಷ ಕಳೆದಿದೆ, ಎಂದಾಗ ಪ್ರಶಾಂತ್ ನಾನು ಮದುವೆಯಾಗುವ ಮೊದಲು ನನಗೆ ಹಿರಿಯ ಅತ್ತಿಗೆಯೊಬ್ಬಳನ್ನು ಮನೆ ತುಂಬಿಸಿಕೊಳ್ಳಬೇಕಿದೆ ,ನಂತರ ನನ್ನ ಯೋಚನೆ ಎಂದಾಗ ಚೆನ್ನಬಸಪ್ಪ ನಗುತ್ತ ಈ ತರಲೆಯೇ ಬೇಡ ಇಬ್ಬರಿಗೂ ಒಟ್ಟಿಗೆ ಮದುವೆ ಮಾಡುವೆ ಎಂದು ನಗುತ್ತಾನೆ. ಪ್ರಶಾಂತ್ ಹ ಹ ಇದು ಸರಿ ಎನ್ನುತ್ತಾ ಅಣ್ಣನನ್ನು ಅಪ್ಪಿಕೊಳ್ಳುತ್ತಾನೆ.

Post a Comment