".

Header Ads

ಇರಾನ್ ಚಹಾ - ಬಾಸ್ಮತಿ ಆಮದಿಗೆ ಹಿಜಾಬ್ ಬಿಸಿ ; ಭಾರತದ ವ್ಯಾಪಾರಿಗಳು ಕಂಗಾಲು !

ಹಿಜಾಬ್‌ ವಿರೋಧಿ ಪ್ರತಿಭಟನೆಗಳಿಂದಾಗಿ ದೇಶಾದ್ಯಂತ ಅಂಗಡಿಗಳು, ಹೋಟೆಲ್‌ಗಳು ಮತ್ತು ಮಾರುಕಟ್ಟೆಗಳು ಬಂದ್‌ ಆಗಿರುವುದರಿಂದ ಏಕಾಏಕಿ ಇರಾನ್‌ ಭಾರತದಿಂದ ಚಹಾ ಮತ್ತು ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದನ್ನು ಇರಾನ್ ಸ್ಥಗಿತಗೊಳಿಸಿದೆ. ಭಾರತದಿಂದ ಚಹಾ ಮತ್ತು ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಸಂಬಂಧ ಹೊಸ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಇರಾನ್ ಸಂಪೂರ್ಣ ಸ್ಥಗಿತಗೊಳಿಸಿರುವ ಇರಾನ್ ನಡೆಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.


ಈ ಹಠಾತ್ ಆಮದು ಸ್ಥಗಿತಕ್ಕೆ ಕಾರಣ ಏನು ಎಂಬುದನ್ನು ಇರಾನಿನ ಖರೀದಿದಾರರು ಸ್ಪಷ್ಟಪಡಿಸಿಲ್ಲ. ಆದರೆ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆಗಳಿಂದಾಗಿ ದೇಶಾದ್ಯಂತ ಅಂಗಡಿಗಳು, ಹೋಟೆಲ್‌ಗಳು ಮತ್ತು ಮಾರುಕಟ್ಟೆಗಳು ಬಂದ್‌ ಆಗಿರುವುದರಿಂದ ಈ ಬೆಳವಣಿಗೆ ನಡೆಯುತ್ತಿರುವುದಾಗಿ ಭಾರತೀಯ ರಫ್ತುದಾರರು ಅಂದಾಜಿಸಿದ್ದಾರೆ.

ಭಾರತ ಮತ್ತು ಇರಾನ್‌ ಸರಕಾರ ರೂಪಾಯಿ ಮೂಲಕ ವ್ಯಾಪಾರ ನಡೆಸಲು ದಾರಿಗಳನ್ನು ಕಂಡುಕೊಳ್ಳುತ್ತಿರುವುದರಿಂದ ಇರಾನ್‌ನ ಆಮದುದಾರರು ಖರೀದಿಯನ್ನು ವಿಳಂಬಗೊಳಿಸುತ್ತಿರಬಹುದು ಎಂದೂ ವ್ಯಾಪಾರಗಳ ಒಂದು ಗುಂಪು ಅಂದಾಜಿಸಿದೆ.

ಒಂದು ವರ್ಷದಲ್ಲಿ ಇರಾನ್ ಸುಮಾರು 3 - 3.5 ಕೋಟಿ ಕೆಜಿ ಸಾಂಪ್ರದಾಯಿಕ ಚಹಾ ಮತ್ತು ಸುಮಾರು 15 ಲಕ್ಷ ಕೆಜಿ ಬಾಸ್ಮತಿ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಇದೀಗ ನಡೆದಿರುವ ಬೆಳವಣಿಗೆಯು ಈ ಸರಕುಗಳ ರಫ್ತುಗಳ ಮೇಲೆ ವಿಶೇಷವಾಗಿ ಚಹಾದ ಮೇಲೆ ಪರಿಣಾಮ ಬೀರುತ್ತದೆ ಎಂದು ರಫ್ತುದಾರರು ಹೇಳಿದ್ದಾರೆ.

Powered by Blogger.