".

Header Ads

‘ಹಾಲು ಉತ್ಪಾದಕರ ಪ್ರೋತ್ಸಾಹಧನ:- ರೂ. 2.05 ರಿಂದ 1 ರೂಗೆ ಕುಸಿತ’ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಕಟಣೆ


ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 30,553 ಸಕ್ರಿಯ ಸದಸ್ಯರಿಂದ ಒಟ್ಟು 2,09,532 ಲೀಟರ್ ಹಾಲು ಸಂಗ್ರಹ ಆಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 1,157 ಸಕ್ರಿಯ ಸದಸ್ಯರು ಸೇರಿ ಒಟ್ಟು 2,393 ಸಕ್ರಿಯ ಸದಸ್ಯರು ಕಡಿಮೆ ಆಗಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ ಒಕ್ಕೂಟದ ವ್ಯಾಪ್ತಿಯಲ್ಲಿ 2,414 ಸದಸ್ಯರು ಹೆಚ್ಚಳ ಆಗಿದ್ದಾರೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕೂಟದ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 3,52,085 ಲೀಟರ್ ಹಾಲು ಮತ್ತು 60,019 ಕೆ.ಜಿ ಮೊಸರು ಮಾರಾಟ ಆಗುತ್ತಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ 3,75,992 ಲೀಟರ್ ಹಾಲು ಮತ್ತು 70,193 ಕೆ.ಜಿ ಮೊಸರು ಮಾರಾಟ ಆಗುತ್ತಿದೆ. ಅಂದರೆ ಪ್ರತಿದಿನ 24,000 ಲೀಟರ್ ಹಾಲು ಹಾಗೂ 10,000 ಲೀಟರ್ ಮೊಸರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಕಳೆದ ಸಾಲಿಗೆ ಹೋಲಿಸಿದಾಗ ಸರಾಸರಿ ಶೇ 25 ರಷ್ಟು ಹೆಚ್ಚು ಮಾರಾಟವಾಗುತ್ತಿದೆ. ಹೆಚ್ಚುವರಿ ಮಾರಾಟದಿಂದಾಗಿ ಒಕ್ಕೂಟಕ್ಕೆ ಇನ್ನೂ ದಿನವಹಿ 40,000 ಲೀಟರ್ ಹಾಲಿನ ಅಗತ್ಯತೆ ಇದೆ ಎಂದರು.

ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು ಕಳೆದ ಸಾಲಿನ ಡಿ. 2021ರಲ್ಲಿ ಉಡುಪಿ ಜಿಲ್ಲೆಯಲ್ಲಿ 3,090 ಮೆಟ್ರಿಕ್ ಟನ್ ಸೇರಿ ಒಟ್ಟು 5,851 ಮೆಟ್ರಿಕ್ ಟನ್ ಮಾರಾಟ ಆಗಿದೆ. ಡಿ. 2022 ರಲ್ಲಿ ಉಡುಪಿ ಜಿಲ್ಲೆಯಲ್ಲಿ 3,748 ಮೆಟ್ರಿಕ್ ಟನ್ ಸೇರಿ ಒಟ್ಟು 7,133 ಮೆಟ್ರಿಕ್ ಟನ್ ಪಶು ಆಹಾರ ಮಾರಾಟ ಆಗಿದ್ದು, ಡಿ. 2022 ರಲ್ಲಿ 1,282 ಮೆಟ್ರಿಕ್ ಟನ್‍ನಷ್ಟು ಉತ್ತಮ ಗುಣಮಟ್ಟದ ಸಮತೋಲನ ಪಶು ಆಹಾರ ಹೆಚ್ಚುವರಿ ಮಾರಾಟ ಆಗಿದೆ ಎಂದು ತಿಳಿಸಿದ್ದಾರೆ.

ಒಕ್ಕೂಟದಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ನವಂಬರ್ ತಿಂಗಳಿನಿಂದ ಸದಸ್ಯರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.05 ರೂ.ಗಳನ್ನು ವಿಶೇಷ ಪ್ರೋತ್ಸಾಹಧನವಾಗಿ ಸದಸ್ಯರಿಗೆ ನೀಡುವುದರಿಂದ ಪ್ರತಿ ತಿಂಗಳು ಒಕ್ಕೂಟದಿಂದ ಸರಾಸರಿ 3 ಕೋಟಿಯಷ್ಟು ಹಣ ಹೆಚ್ಚುವರಿ ಹಾಲಿನ ಬಟವಡೆಗಾಗಿ ವಿನಿಯೋಗಿಸಲಾಗುತ್ತಿದ್ದು, ಇದರಿಂದ ಒಕ್ಕೂಟವು ನಷ್ಟವಾಗಲು ಕಾರಣ. ಈ ರೀತಿಯ ವಿಶೇಷ ಪ್ರೋತ್ಸಾಹ ಧನ ಮುಂದುವರೆಸಿದಲ್ಲಿ ಮೂರು ತಿಂಗಳಲ್ಲಿ 10 ಕೋಟಿಯಷ್ಟು ಒಕ್ಕೂಟವು ನಷ್ಟ ಅನುಭವಿಸಬೇಕಾಗುತ್ತದೆ. ಒಕ್ಕೂಟದಲ್ಲಿ 63 ರಿಂದ 64 ಕೋಟಿಯಷ್ಟು ಹಣ ಅಭಿವೃದ್ಧಿ ನಿಧಿಯಾಗಿ ಸಂಗ್ರಹಣೆ ಆಗಿದೆ.

ಬರುವ 3 ಕೋಟಿ ಬಡ್ಡಿಯನ್ನು ಹಾಲಿನ ಖರೀದಿಗೆ ವಿನಿಯೋಗಿಸಿದಾಗ ತಿಂಗಳು ಹಾಲಿನ ಪ್ರೋತ್ಸಾಹಧನವನ್ನು ಮಾತ್ರ ನೀಡಲು ಸಾಧ್ಯವಾಗುವುದು. ಆದ್ದರಿಂದ ಹಾಲಿನ ಉತ್ಪಾದಕರನ್ನು ಉತ್ತೇಜಿಸುವುದು ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು 2023 ರ ಜ.11 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ರೂಪಾಯಿ 2.05 ವಿಶೇಷ ಪ್ರೋತ್ಸಾಹಧನದಲ್ಲಿ 1.05 ರೂಪಾಯಿಯನ್ನು ವಾಪಸ್ ಪಡೆದು 1 ರೂಪಾಯಿಗಳ ವಿಶೇಷ ಪ್ರೋತ್ಸಾಹಧನ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
Powered by Blogger.