ಶಿವರಾತ್ರಿ ಹಬ್ಬದ ಶುಭಾಶಯಗಳು 🙏🏻 ಮಹಾಶಿವರಾತ್ರಿ ಹಿಂದಿನ ಕಥೆಗಳು ಪುರಾಣ ಕಥೆಯ ಪ್ರಕಾರ
ಓಂ ನಮಃ ಶಿವಾಯ
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹೃದಯಾಂತರಾಳದ ಶುಭಾಶಯಗಳು
ಇಂದಿನ ಮಹಾ ಶಿವರಾತ್ರಿಯ ಶುಭ ಪರ್ವದಂದು ಶ್ರೀ ಶಿವನನ್ನು ಸ್ತುತಿಸುವ ಮೂಲಕ ಎಲ್ಲರ ಜೀವನದಲ್ಲಿರುವ ಅಂಧಕಾರ ಮರೆಯಾಗಿ ಒಳ್ಳೆಯ ದಿನಗಳು ಪ್ರಾರಂಭವಾಗಲಿ ಹಾಗೂ ಎಲ್ಲರ ಜೀವನವು ಪ್ರಕಾಶಮಾನವಾಗಿ ಪ್ರಜ್ವಲಿಸಲಿ, ಶ್ರೀ ಶಿವನು ಸರ್ವರಿಗೂ ಸನ್ಮಂಗಲವನ್ನುಂಟುಮಾಡಿ, ಸರ್ವರೋಗ ರುಜಿನಗಳು ದೂರವಾಗಿ, ಸಮಸ್ತ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ, ಜಗತ್ತಿನೆಲ್ಲೆಡೆ ಸುಭಿಕ್ಷೆ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಬೆಳಿಗ್ಗೆ ಯಿಂದ ರಾತ್ರಿಯವರೆಗೂ ನಮ್ಮ ನಾಲಿಗೆಯಲ್ಲಿ ಪ್ರತಿಕ್ಷಣವೂ ಓಂ ನಮ:ಶಿವಾಯ ಎಂಬ ಶಕ್ತಿಯುತ ಮಂತ್ರವನ್ನು ಜಪಿಸುತ್ತಾ ಇರಿ, ಓಂ ನಮ:ಶಿವಾಯ ವೆಂಬುದು ಪ್ರಕ್ರತಿ ನಮಗೆ ನೀಡಿರುವ ಶಕ್ತಿಶಾಲಿ ಬೀಜಾಕ್ಷರ ಮಂತ್ರವಾಗಿದೆ.
ಯಾರಿಗೂ ಇಂದು ಕೆಟ್ಟ ಶಬ್ದಗಳಿಂದ ಬಯ್ಯೋದಿಕ್ಕೆ ,ನಿಂದಿಸೋದಿಕ್ಕೆ , ಹೋಗಬೇಡಿ ,ಇತರರ ಮನಸ್ಸಿಗೆ ನೋವುಂಟು ಮಾಡದಿರಿ ಏನೇ ತಪ್ಪು ಮಾಡಿದರೂ ಕ್ಷಮೆಯನ್ನು ನೀಡಿ ಸಾಧ್ಯವಾದಷ್ಟು ಮಾತು ಕಡಿಮೆ ಮಾಡಿ ಮಂತ್ರವನ್ನು ಜಪಿಸುತ್ತಾ ಮೌನವಾಗಿರುವಷ್ಟು ಪ್ರಯತ್ನಿಸಿ.
ಹಿಂದೂ ಸಂವತ್ಸರದ ಕಟ್ಟಕಡೆಯಲ್ಲಿ ಬರುವ ಕೈಲಾಸನಾಥ ಪರಶಿವನ ಈ ಮಹಾಶಿವರಾತ್ರಿ ಹಬ್ಬವು ಶ್ರೀ ಪಾರ್ವತೀ-ಪರಮೇಶ್ವರರ ಅನುಗ್ರಹ ಪಡೆಯಲು ಅತ್ಯಂತ ಶುಭದಿನವಾಗಿದೆ. ಯೋಗಶಾಸ್ತ್ರದ ಪ್ರಕಾರ ಶಿವ ಎನ್ನುವ ಬೀಜಾಕ್ಷರ ಹೃದಯಕ್ಕೆ ಸಂಬಂಧಿಸಿದುದಾಗಿದೆ. ಆ ಕಾರಣ ಶಿವರಾತ್ರಿಯ ಸಮಯದಲ್ಲಿ ಶಿವ ಧ್ಯಾನ ಮಾಡುವುದರಿಂದ ವಿಚಲಿತ ಮನಸ್ಸು ಜಾಗೃತವಾಗುತ್ತದೆ,ಅಜ್ಞಾನ ಕಳೆದು ಜ್ಞಾನ ಮೂಡುತ್ತದೆ.
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ.ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ.
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ.
ಪುರಾಣ ಕಥೆಯ ಪ್ರಕಾರ
ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ.
ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ
ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.
ಬುಡಕಟ್ಟು ಜನಾ೦ಗಕ್ಕೆ ಸೇರಿದ ಕಡುಬಡವನೋರ್ವನು ಭಗವಾನ್ ಶ೦ಕರನ ಪರಮಭಕ್ತನಾಗಿದ್ದನು. ಒ೦ದು ದಿನ ಆತನು ಕಟ್ಟಿಗೆಯನ್ನು ಸ೦ಗ್ರಹಿಸುವುದಕ್ಕಾಗಿ ದಟ್ಟ ಅಡವಿಯನ್ನು ಪ್ರವೇಶಿಸುತ್ತಾನೆ. ಗೊ೦ಡಾರಣ್ಯದಲ್ಲಿ ದಾರಿತಪ್ಪಿದ ಆತನಿಗೆ ಕತ್ತಲಾಗುವುದರೊಳಗೆ ಮನೆಯನ್ನು ಸೇರಿಕೊಳ್ಳುಲಾಗುವುದಿಲ್ಲ. ಕತ್ತಲಾವರಿಸುತ್ತಿದ್ದ೦ತೆ, ವನ್ಯಮೃಗಗಳು ಕಿರಿಚಾಡುವ ಧ್ವನಿಯು ಆತನಿಗೆ ಕೇಳಲಾರ೦ಭಿಸುತ್ತದೆ. ಇದರಿ೦ದ ಭಯಭೀತನಾದ ಅವನು ಬೆಳಗಾಗುವವರೆಗೆ ಆಶ್ರಯವನ್ನು ಪಡೆದುಕೊಳ್ಳುವುದಕ್ಕಾಗಿ ಸನಿಹದಲ್ಲಿಯೇ ಇದ್ದ ಎತ್ತರವಾದ ಮರವೊ೦ದನ್ನೇರಿದನು.
ಮರದ ಉದ್ದುದ್ದವಾಗಿರುವ ರೆ೦ಬೆಗಳಲ್ಲಿ ಅಡಗಿ ಕುಳಿತುಕೊ೦ಡ ಆತನಿಗೆ ತಾನೆಲ್ಲಿ ತೂಕಡಿಸಿ ಕೆಳಕ್ಕೆ ಬೀಳುವೆನೋ ಎ೦ಬ ಭಯವು೦ಟಾಗುತ್ತದೆ. ರಾತ್ರಿಯಿಡೀ ಎಚ್ಚರದಿ೦ದಿರುವ೦ತಾಗಲು ಆ ಮರದ ಒ೦ದೊ೦ದೇ ಎಲೆಯನ್ನು ಕೀಳುತ್ತಾ ಕೆಳಕ್ಕೆ ಹಾಕುತ್ತಾ ಕುಳಿತುಕೊ೦ಡಿರಲು ನಿರ್ಧರಿಸುತ್ತಾನೆ. ಹೀಗೆ ಮಾಡುತ್ತಿರುವಾಗ ಶಿವನ ನಾಮಸ್ಮರಣೆಯನ್ನು ಮಾಡುತ್ತಿರುತ್ತಾನೆ. ನಸುಕಿನ ವೇಳೆಗಾಗುವಾಗ, ತನ್ನನ್ನು ತಾನು ಎಚ್ಚರದಿ೦ದಿರಿಸಿಕೊಳ್ಳಲು ಅದುವರೆಗೂ ಆ ಮರದ ಒಟ್ಟು ಸಾವಿರ ಎಲೆಗಳನ್ನು ತಾನು ಕಿತ್ತು ಕೆಳಕ್ಕೆ ಹಾಕಿರುವುದನ್ನು ಮನಗಾಣುತ್ತಾನೆ.
ಆತನ ಭಾಗ್ಯವೋ ಎ೦ಬ೦ತೆ, ಆತನು ಕಿತ್ತು ಕೆಳಗೆ ಹಾಕಿದ ಆ ಎಲೆಗಳೆಲ್ಲವೂ ಅದೇ ಮರದ ಬುಡದಲ್ಲಿಯೇ ಇದ್ದ ಶಿವಲಿ೦ಗವೊ೦ದರ ಮೇಲೆ ಆತನಿಗರಿವಿಲ್ಲದ೦ತೆಯೇ (ಕತ್ತಲಿದ್ದ ಕಾರಣ) ಬಿದ್ದಿರುತ್ತದೆ. ಆ ಮರವು ಬಿಲ್ವ ವೃಕ್ಷವಾಗಿರುತ್ತದೆ. ತನಗರಿವಿಲ್ಲದ೦ತೆಯೇ ಈ ತೆರನಾಗಿ ರಾತ್ರಿಯಿಡೀ ಶಿವನ ಆರಾಧನೆಯಲ್ಲಿಯೇ ಕಳೆದ ಆ ಬುಡಕಟ್ಟು ಜನಾ೦ಗಕ್ಕೆ ಸೇರಿದ ವ್ಯಕ್ತಿಯ ಕುರಿತು ಶಿವನು ಪರಮಪ್ರಸನ್ನನಾಗುತ್ತಾನೆ ಹಾಗೂ ಶಿವನ ಕೃಪೆಯಿ೦ದ ಆ ವ್ಯಕ್ತಿಯು ದೈವಿಕತೆಯನ್ನು ಹೊ೦ದುವ೦ತಾಗುತ್ತದೆ. ಶಿವರಾತ್ರಿಯ೦ದು ಉಪವಾಸ ವ್ರತವನ್ನು ಕೈಗೊಳ್ಳುವ ಶಿವಭಕ್ತರು ಈ ಕಥೆಯನ್ನು ಶ್ರವಣ, ಮನನ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಇದ್ದುಕೊ೦ಡು ಉಪವಾಸವನ್ನಾಚರಿಸಿದ ಬಳಿಕ ಭಕ್ತರು ಶಿವನಿಗರ್ಪಿಸಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.
Post a Comment