ವಾಟ್ಸ್‌ಆಯಪ್ ಮೂಲಕ ಆಹಾರ ಖರೀದಿಸುವ ವ್ಯವಸ್ಥೆ ಪರಿಚಯಿಸಿದ ರೈಲ್ವೆ
ರೈಲು ಪ್ರಯಾಣಿಕರು ಇನ್ನುಮುಂದೆ ವಾಟ್ಸ್‌ಆಯಪ್ ಚಾಟ್ ಮೂಲಕವೇ ಆಹಾರ ಖರೀದಿಸುವಂಥ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಇ) ಸೋಮವಾರ ಪರಿಚಯಿಸಿದೆ.
ಐಆರ್‌ಸಿಟಿಸಿ ಈಗಾಗಲೇ ಇ-ಕೇಟರಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ.
ವೆಬ್‌ಸೈಟ್ ಅಥವಾ ಇ-ಕೇಟರಿಂಗ್ ಫುಡ್ ಆಯಪ್ ಮೂಲಕ ಗ್ರಾಹಕರು ಆಹಾರ ಖರೀದಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇ-ಕೇಟರಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಮಾಡುವ ಸಲುವಾಗಿ +91-8750001323 ವಾಟ್ಸ್‌ಆಯಪ್ ಸಂಖ್ಯೆಯನ್ನು ರೈಲ್ವೆ ಇಲಾಖೆ ನೀಡಿದೆ.
ಎರಡು ಹಂತಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ, ಇ-ಟಿಕೆಟ್ ಕಾಯ್ದಿರಿಸುವ ಗ್ರಾಹಕರಿಗೆ www.ecatering.irctc.co.in. ಎಂಬ ಲಿಂಕ್ ಕಳಿಸಲಾಗುವುದು. ಅವರು ಈ ಲಿಂಕ್ ಬಳಿಸಿ ತಮ್ಮಿಷ್ಟದ ಆಹಾರ ಆರ್ಡರ್ ಮಾಡಬಹುದು. ಎರಡನೇ ಹಂತದಲ್ಲಿ ಗ್ರಾಹಕರಿಗೆ ವಾಟ್ಸ್‌ಆಯಪ್ ಸಂಖ್ಯೆ ದೊರಕುವಂತೆ ಮಾಡಲಾಗುವುದು. ಈ ಸಂಖ್ಯೆ ಬಳಸಿ ಗ್ರಾಹಕರು ತಮ್ಮ ಅಗತ್ಯಗಳ ಕುರಿತು ಸಂದೇಶ ರವಾನಿಸಬಹುದು. ಕೃತಕ ಬುದ್ಧಿಮತ್ತೆ (ಎಐ) ನಿಯಂತ್ರಿತ ವ್ಯವಸ್ಥೆಯು ಗ್ರಾಹಕರ ಜೊತೆ ಚಾಟ್ ಮಾಡಿ ಅವರ ಆದೇಶಗಳನ್ನು ಸ್ವೀಕರಿಸಲಿದೆ.
ಸದ್ಯ ಆಯ್ದ ರೈಲುಗಳಲ್ಲಿ ಮಾತ್ರ ಈ ಸೌಲಭ್ಯ ನೀಡಲಾಗುವುದು. ಪ್ರಯಾಣಿಕರ ಅಭಿಪ್ರಾಯದ ಆಧರಿಸಿ ಇತರ ರೈಲುಗಳಿಗೂ ಈ ಸೇವೆ ವಿಸ್ತರಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಐಆರ್‌ಸಿಟಿಸಿಯ ಇ-ಕೇಟರಿಂಗ್ ಸೇವೆ ಮೂಲಕ ಪ್ರತಿದಿನ ಸುಮಾರು 50,000 ಊಟವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

Post a Comment