".

Header Ads

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ; ಸುರೇಖಾ ದೇವಾಡಿಗ ಸಂಪಾದಿತ `ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್’ ಕೃತಿ ಬಿಡುಗಡೆ

ಹೋರಾಟದ ಮೂಲಕ ಕ್ರಾಂತಿಯ ಕನಸನ್ನು ಕಂಡವರು ಜಾರ್ಜ್ :  ಅಡ್ವಕೇಟ್ ಪದ್ಮನಾಭ ಶೆಟ್ಟಿ

 ಜಾರ್ಜ್ ಫೆರ್ನಾಂಡಿಸ್ ಅವರನ್ನು ಬಹಳ ಹತ್ತಿರದಿಂದ ಕಂಡವನು ನಾನು. ಬರೋಡ ಡೈನಮೈಟ್ ಕೇಸ್ ಪ್ರಕರಣದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆ ಆರು ತಿಂಗಳು ತಿಹಾರ್ ಜೈಲಿನಲ್ಲಿದ್ದೆವು. ಜಾರ್ಜ್ ಫೆರ್ನಾಂಡಿಸ್ ರವರ ಮುಖಂಡತ್ವದಲ್ಲಿ ಬೋಂಬೆ ಲೇಬರ್ ಯೂನಿಯನ್‌ನಲ್ಲಿ ಮತ್ತು ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್‌ನಲ್ಲಿ ಇಪ್ಪತ್ತೈದು  ವರ್ಷ ಕೆಲಸ ಮಾಡಿದ್ದೇನೆ. ಅವರು ನನ್ನ ನೆಚ್ಚಿನ ನಾಯಕರಾಗಿದ್ದರು. 11 ತಿಂಗಳ ಅವರ ಆಡಳಿತದಲ್ಲಿ ಕೊಂಕಣ ರೈಲ್ವೆ ಯೋಜನೆಯನ್ನು ಯಶಸ್ವೀಗೊಳಿಸಿ ಕರಾವಳಿ ಜನರ ಕನಸನ್ನು ನನಸು ಮಾಡಿದವರು. ಕಾರ್ಮಿಕ ನೇತಾರರಾಗಿ, ರಾಜಕಾರಣಿ, ಸರಳ ವ್ಯಕ್ತಿತ್ವದ ಜಾರ್ಜ್ ಫೆರ್ನಾಂಡಿಸ್ ಅವರ ಕೃತಿ ಬಂದಿರುವುದನ್ನು ಬಹಳ ಸಂತಸದ ವಿಷಯ ಎಂದು ಜಾರ್ಜ್ ಫೆರ್ನಾಂಡಿಸ್ ಅವರ ನಿಕಟವರ್ತಿಯಾದ ಅಡ್ವಕೇಟ್ ಪದ್ಮನಾಭ ಶೆಟ್ಟಿಯವರು ನುಡಿದರು. 

ಅವರು ಫೆ.11ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಭವನದಲ್ಲಿ ಸುರೇಖಾ ದೇವಾಡಿಗರು ಸಂಪಾದಿಸಿರುವ `ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯ ಅವರು `ಜಾರ್ಜ್ ಅವರು ಮಾನವತಾವಾದಿ, ಜಾತಿ, ಮತ, ಪಂಥ, ಪಂಗಡಗಳನ್ನು ಮೀರಿ ಬೆಳೆದ ದೂರದೃಷ್ಟಿ ಹೊಂದಿದ್ದ, ಪ್ರಗತಿಶೀಲ ಚಿಂತಕರಾಗಿದ್ದವರು. ಜಾರ್ಜ್ ಅವರ ಕೃತಿಯನ್ನು ಬಹು ಶ್ರಮವಹಿಸಿ ರಚಿಸಿದ ಸುರೇಖಾ ದೇವಾಡಿಗರವರ ಶ್ರಮ ಸಾರ್ಥಕ’ ಎಂದು ಅಭಿಪ್ರಾಯಪಟ್ಟರು.

ಕೃತಿಕಾರರಾದ ಸುರೇಖಾ ದೇವಾಡಿಗರು ಕೃತಿ ರಚನೆಯ ಸಂದರ್ಭದಲ್ಲಿನ ತನ್ನ ಅನುಭವಗಳನ್ನು

ಹಂಚಿಕೊಂಡರು. ತನಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು. ಕೃತಿಯನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಂಶೋಧನ ಸಹಾಯಕರಾದ ಡಾ. ಉಮಾ ರಾಮರಾವ್ ಅವರು ಪರಿಚಯಿಸುತ್ತಾ, ನಮ್ಮೆಲ್ಲರ ಹೆಮ್ಮೆಯ ಕನ್ನಡಿಗರಾಗಿರುವ ಜಾರ್ಜ್ ಫೆರ್ನಾಂಡಿಸ್ ಅವರು ಕೆಚ್ಚೆದೆಯ ನಾಯಕರು, ಬಹುಮುಖ ಪ್ರತಿಭೆಯ ರಾಜಕೀಯ ಧುರೀಣರು. ಇಂತಹ ವ್ಯಕ್ತಿಯ ಜೀವನಸಾಧನೆಗಳನ್ನು ಕುರಿತು ಹಲವಾರು ಅಧಿಕೃತ ಮಾಹಿತಿಗಳನ್ನು ಕಲೆಹಾಕಲಾಗಿದೆ. ಅವರನ್ನು ಅರಿಯ ಬಯಸುವವರಿಗೆ ಒಂದು ಸಮರ್ಥವಾದ ಕೈಪಿಡಿಯಾಗಿ ಈ ಪುಸ್ತಕ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಎಸ್. ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದರು. ಕೃತಿಕಾರರಾದ ಸುರೇಖಾ ದೇವಾಡಿಗ ದಂಪತಿಯನ್ನು ಶಾಲು ಹೊದಿಸಿ ಗೌರವಿಸಲಾಯಿತು. ಮಾರ್ಗದರ್ಶಕರಾದ ಡಾ. ಜಿ.ಎನ್.ಉಪಾಧ್ಯ, ಡಾ.

ಪೂರ್ಣಿಮಾ ಸುಧಾಕರ ಶೆಟ್ಟಿ, ಡಾ. ಉಮಾ ರಾಮರಾವ್ ಹಾಗೂ ಸವಿತಾ ಎಸ್. ಶೆಟ್ಟಿಯವರನ್ನು ಸುರೇಖಾ ದೇವಾಡಿಗರವರು ಗೌರವಿಸಿದರು. 

ವಿದ್ಯಾ ರಾಮಕೃಷ್ಣ ರವರು ತಾಂತ್ರಿಕವಾಗಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಾಣಿ ಪುರವಣಿಯ ಸಂಪಾದಕರಾದ ಶಶಿಧರ ಹಾಲಾಡಿ, ಡಾ. ವಿಶ್ವನಾಥ ಕಾರ್ನಾಡ್, ಮುಂಬಯಿ ದೇವಾಡಿಗ

ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್, ಹೇಮನಾಥ್ ದೇವಾಡಿಗ, ವಾಣಿ ಉಚ್ಚಿಲ್ಕರ್, ಉಮೇಶ್ ಶೆಟ್ಟಿ, ಎಸ್.ಕೆ. ಸುಂದರ್, ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. `ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್’ ಕೃತಿಯನ್ನು ಕೊಂಡುಕೊಳ್ಳಬಯಸುವವರು ಸುರೇಖಾ ದೇವಾಡಿಗರವರ -9619902920 ಈ ಮೊಬೈಲ್ ನಂಬರನ್ನು ಸಂಪರ್ಕಿಸಬಹುದು.

Powered by Blogger.