".

Header Ads

ವಿಮಾದಾರರಿಗೆ ಶಾಕ್ ನೀಡಿದ ಬಜೆಟ್



ವಿಮಾ ಕ್ಷೇತ್ರಕ್ಕೆ ಪೂರಕ ಘೋಷಣೆಗಳಾಗಬಹುದು, ತೆರಿಗೆ ವಿನಾಯಿತಿ ಮಿತಿ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸುತ್ತಿದ್ದವರಿಗೆ  5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವಿಮೆಗೆ ತೆರಿಗೆ ವಿನಾಯಿತಿ (Tax exemption) ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್​ಗಳನ್ನು ಹೊರತುಪಡಿಸಿ 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಜೀವ ವಿಮಾ ಪಾಲಿಸಿಗಳಿಗೆ ತೆರಿಗೆ ವಿನಾಯಿತಿ ನೀಡುವುದು 2023ರ ಏಪ್ರಿಲ್ 1ರಿಂದ ಸ್ಥಗಿತಗೊಳ್ಳಲಿದೆ ಎಂದು ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ. ವಿಮೆ ಹೊಂದಿರುವ ವ್ಯಕ್ತಿ ಮೃತಪಟ್ಟಾಗ ದೊರೆಯುವ ಮೊತ್ತಕ್ಕೆ ಪರಿಷ್ಕೃತ ನಿಯಮ ಅನ್ವಯವಾಗುವುದಿಲ್ಲ ಎಂದೂ ತಿಳಿಸಲಾಗಿದೆ. ಹೊಸ ತೆರಿಗೆ ನಿಯಮ 2023ರ ಮಾರ್ಚ್​ 31ರ ಒಳಗೆ ಅವಧಿಪೂರ್ಣಗೊಳ್ಳುವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವುದಿಲ್ಲ.

ಒಂದು ಅಥವಾ ಅದಕ್ಕಿಂತ ಹೆಚ್ಚಿನ ಎಷ್ಟೇ ವಿಮಾ ಪಾಲಿಸಿಗಳನ್ನು ಹೊಂದಿದ್ದರೂ ವರ್ಷದ ಅವಧಿಯಲ್ಲಿ ಅದರ ಪ್ರೀಮಿಯಂ ಮೊತ್ತ 5 ಲಕ್ಷ ರೂ. ದಾಟಿದ್ದರೆ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು 'ಕ್ಲಿಯರ್' ಸಿಇಒ ಅರ್ಚಿತ್ ಗುಪ್ತಾ ತಿಳಿಸಿರುವುದಾಗಿ 'ಮನಿ ಕಂಟ್ರೋಲ್' ವರದಿ ಮಾಡಿದೆ. ಮುಂದಿನ ಹಣಕಾಸು ವರ್ಷಕ್ಕೆ ಮಾಡಿಸಿಕೊಳ್ಳುವ ವಿಮೆಗೆ ಹೊಸ ನಿಯಮ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

2.5 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್​​ಗಳ ತೆರಿಗೆ ವಿನಾಯಿತಿಯನ್ನು 2021ರ ಬಜೆಟ್​ನಲ್ಲೇ ರದ್ದುಗೊಳಿಸಲಾಗಿತ್ತು. ಇದೀಗ 5 ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂ ಮೊತ್ತದ ವಿಮೆಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿರುವ ಸರ್ಕಾರದ ನಡೆ ವಿಮಾ ಕ್ಷೇತ್ರದ ಕಂಪನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಹೊಸ ನಿಯಮದಿಂದಾಗಿ ಜನರು ಸಾಂಪ್ರದಾಯಿಕ ಜೀವ ವಿಮೆ ಮಾಡಿಸಿಕೊಳ್ಳುವ ಬದಲು ಟರ್ಮ್ ಇನ್ಶೂರೆನ್ಸ್​ ಬಗ್ಗೆ ಹೆಚ್ಚು ಗಮನಹರಿಸುವ ಸಾಧ್ಯತೆ ಇದೆ. ಇದರಿಂದ ಜನರು ಸಂಪೂರ್ಣವಾಗಿ ಹೂಡಿಕೆ ಆಧಾರಿತ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್​​ಗಳ ಕಡೆಗೆ ಒಲವು ಹೆಚ್ಚಾಗುವ ಕಳವಳ ವ್ಯಕ್ತವಾಗಿದೆ ಎಂದು ಇನ್ಶೂರೆನ್ಸ್ ಮಧ್ಯವರ್ತಿ ಕಂಪನಿ 'ಸೆಕ್ಯೂರ್ ನೌ' ಸ್ಥಾಪಕ ಕಪಿಲ್ ಮೆಹ್ತಾ ಹೇಳಿದ್ದಾರೆ.


 

Powered by Blogger.