".

Header Ads

ಕಾರ್ಕಳದ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಲಿದೆ ಅಯೋಧ್ಯೆ ಶ್ರೀ ರಾಮನ ಬಾಲರಾಮನ ವಿಗ್ರಹ , ಟ್ರಸ್ಟ್ ಅಂತಿಮ ನಿರ್ಧಾರ



  ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ   ಭವ್ಯ ರಾಮಮಂದಿರ  ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ನಿರ್ಮಾಣದಲ್ಲಿ ಕರ್ನಾಟಕದವರ  ಕೊಡುಗೆಯೂ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದೆ.
  ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾದ  ಕಾರ್ಕಳದ ಪುಣ್ಯ ಮಣ್ಣಿನಲ್ಲಿ ಪ್ರಭು ಶ್ರೀ ರಾಮಚಂದ್ರನ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಚಂದ್ರನ ಮೂರ್ತಿಯಾಗುವ ಯೋಗ ಕೂಡಿ ಬಂದಿದ್ದು , ಅದರಲ್ಲೂ ಬಾಲರಾಮನ ವಿಗ್ರಹವನ್ನು ನಿರ್ಮಿಸಲು ರಾಜ್ಯದ ಕಾರ್ಕಳ  ಹಾಗೂ ಹೆಚ್.ಡಿ. ಕೋಟೆಯಿಂದ  ತರಿಸಲಾದ ಕಪ್ಪು ಕಲ್ಲನ್ನು ಬಳಸಲು ನಿರ್ಧರಿಸುವುದು ವಿಶೇಷವಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಸೋವಾರದಿಂದ 2 ದಿನಗಳ ಸಭೆ ಸೇರಿದ್ದು, ಅಲ್ಲಿ ವಿಗ್ರಹಕ್ಕೆ ಅಗತ್ಯವಾದ ಶಿಲೆ ಬಳಕೆ, ವಿಗ್ರಹದ ಸ್ವರೂಪ, ಶಿಲ್ಪಿ ಆಯ್ಕೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ನೂತನ ರಾಮನ ವಿಗ್ರಹ ನಿರ್ಮಾಣದ ಹೊಣೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.

  ಈಗಾಗಲೇ ರಾಮನ ವಿಗ್ರಹ ನಿರ್ಮಾಣಕ್ಕೆ ಕರ್ನಾಟಕದ ಕಾರ್ಕಳ, ಮೈಸೂರಿನ ಹೆಚ್.ಡಿ ಕೋಟೆ ಸೇರಿದಂತೆ ದೇಶ - ವಿದೇಶಗಳ ವಿವಿಧ ಭಾಗಗಳಿಂದ ಶಿಲೆಗಳನ್ನು ಆರಿಸಲಾಗಿತ್ತು. ಈ ಪೈಕಿ ಕಾರ್ಕಳದ ಕರಿಕಲ್ಲು ಅಂತಾರಾಷ್ಟ್ರೀಯ ಮಟ್ಟದಲ್ಲೇ ಭಾರಿ ಪ್ರಸಿದ್ಧಿ ಪಡೆದಿದೆ. ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಭಾರಿ ಜನಪ್ರಿಯ. ಈ ರೀತಿಯ ಹಿನ್ನೆಲೆಯಿರುವ ಕಾರ್ಕಳದ ಹಾಗೂ ಹೆಚ್‍ಡಿ ಕೋಟೆಯ ಕಲ್ಲನ್ನು ರಾಮನ ವಿಗ್ರಹ ನಿರ್ಮಾಣಕ್ಕೆ ಬಳಸಲು ಅಂತಿಮವಾಗಿ ನಿರ್ಧರಿಸಲಾಗಿದೆ.

 ಅಯೋಧ್ಯೆಯಲ್ಲಿ ಇದ್ದ ಬಾಲರಾಮನ ವಿಗ್ರಹಕ್ಕಿಂತ ಸಂಪೂರ್ಣ ವಿಭಿನ್ನ ರೀತಿಯ ನೂತನ ವಿಗ್ರಹವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ರಾಮನ ಮೂರ್ತಿ 5ನೇ ವಯಸ್ಸಿನ ಅವತಾರದಲ್ಲಿ ಇರುವ ಬಾಲಕನ ರೀತಿ ನಿರ್ಮಾಣವಾಗಲಿದೆ. ಈ ವಿಗ್ರಹವು 5 ಅಡಿ ಎತ್ತರವಿರಲಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮಾದರಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲು ಸೂಚಿಸಲಾಗಿದೆ ಎಂದು ಟ್ರಸ್ಟ್ ನಿರ್ಧರಿಸಿದೆ.





Powered by Blogger.