".

Header Ads

ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ , ಜುಲೈ 26 ಮತ್ತು ಜುಲೈ 27ರಂದು ಎರಡು ದಿನ ಈ ವಿಜಯೋತ್ಸವ ಆಚರಣೆ

 


ದೇಶವೇ ಹೆಮ್ಮೆಪಡುವಂತಹ 24ನೇ ಕಾರ್ಗಿಲ್ ವಿಜಯೋತ್ಸವವು   ಲಡಾಖ್‌ನ ದ್ರಾಸ್ ನಲ್ಲಿ ಜರುಗಲಿದೆ.

 

ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಯೋಧರ ತ್ಯಾಗ, ಬಲಿದಾನ ಕುರಿತು ಸ್ಮರಿಸಲಿದ್ದಾರೆ.

ಈ ಬಾರಿ ಜುಲೈ 26 ಮತ್ತು ಜುಲೈ 27ರಂದು ಎರಡು ದಿನ ಈ ವಿಜಯೋತ್ಸವ ಆಚರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಸಮಾರಂಭದಲ್ಲಿ ಸೇನೆಯ ಬ್ಯಾಂಡ್ ತಂಡ ಸಹ ದೇಶಭಕ್ತಿ ಗೀತೆಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ ಸ್ಥಳೀಯ ಸಾಂಸ್ಕೃತಿಕ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.

ಪಾಕ್ ವಿರುದ್ಧದ ಭಾರತದ ವಿಜಯೋತ್ಸವ ಆಚರಣೆ ವೇಳೆ ನಮ್ಮ ಯೋಧರ ಧೈರ್ಯ, ಕೊಡುಗೆಗಳನ್ನು ಗಣ್ಯರು ಸ್ಮರಿಸುತ್ತಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಧೈರ್ಯ ಹಾಗೂ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ಯುದ್ಧದಲ್ಲಿ ತಾಯ್ನಾಡಿಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿ ಹುತಾತ್ಮರಾದ ಭಾರತೀಯ ವೀರ ಸೈನಿಕರನ್ನು ಹೆಮ್ಮೆಯಿಂದ ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ.

 

1999ರ ಮೇ ತಿಂಗಳಲ್ಲಿ ಪಾಕಿಸ್ತಾನವು ತನ್ನ ಸೈನಿಕರನ್ನು ನುಸುಳುಕೋರರ ವೇಷದಲ್ಲಿ ಭಾರತದ ಗಡಿಯೊಳಗೆ ಕಳುಹಿಸಿತ್ತು. ಈ ಪಾಕ್ ಯೋಧರು ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಎಲ್‌ಒಸಿ ಗುಡಿಗುಂಟ ಅಡಗಿ ಕುಳಿತುಕೊಂಡಿದ್ದರು. ಭಾರತದ ಗಡಿಯಲ್ಲಿ ಸಂಘರ್ಷ ಸೃಷ್ಟಿಸುವುದಕ್ಕಾಗಿ ಲಡಾಕ್ ಮತ್ತು ಕಾಶ್ಮೀರ ನಡುವಿನ ಸಂಪರ್ಕ ಕಡಿತ ಮಾಡುವುದು ಪಾಕ್ ಯೋಧರ ಉದ್ದೇಶವಾಗಿತ್ತು. ಈ ವೇಳೆ, ಪಾಕ್ ಸೈನಿಕರು ಪರ್ವತಗಳ ತುದಿಯಲ್ಲಿದ್ದರೆ ಭಾರತದ ಯೋಧರು ಪರ್ವತದ ತಪ್ಪಲಿನಲ್ಲಿದ್ದರು. ಹಾಗಾಗಿ, ಭಾರತೀಯ ಸೇನೆಯ ಮೇಲೆ ಪಾಕ್ ಸೈನಿಕರ ದಾಳಿ ನಡೆಸುವುದು ಬಹಳ ಸುಲಭವಾಗಿತ್ತು. ಅಂತಿಮವಾಗಿ ಎರಡೂ ಕಡೆಯಿಂದಲೂ ಯುದ್ಧ ಘೋಷಣೆಯಾಯಿತು. ಪಾಕಿಸ್ತಾನದ ಯೋಧರು ಎಲ್‌ಒಸಿಯನ್ನು ದಾಟಿ ಭಾರತದ ಗಡಿಯೊಳಗೇ ನುಗ್ಗಿದರು.

 

1999 ಮೇ 3ರಂದು ಕಾರ್ಗಿಲ್ ಯುದ್ಧವನ್ನು ಪಾಕಿಸ್ತಾನವು ಆರಂಭಿಸಿತು. ಕಾರ್ಗಿಲ್ ಜಿಲ್ಲೆಯ ಬಂಡೆಗಳಿಂದ ಕೂಡಿರುವ ಪರ್ವತಗಳಲ್ಲಿ ಪಾಕಿಸ್ತಾನದ ಸುಮಾರು 50000ಕ್ಕೂ ಅಧಿಕ ಸೈನಿಕರು ಅಡಗಿಕೊಂಡಿದ್ದರು ಮತ್ತು ಆ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಯಾವಾಗ ಈ ಮಾಹಿತಿ ದೊರೆಯಿತೋ ಭಾರತೀಯ ಸೇನೆಯ ಆಪರೇಷನ್ ವಿಜಯ್ ಆರಂಭಿಸಿತು. ಭಾರತದ ಗಡಿಯೊಳಗೇ ನುಗ್ಗಿದ್ದ ಅಷ್ಟೂ ಪಾಕಿಸ್ತಾನ ಸೈನಿಕರನ್ನು ವಾಪಸ್ ಪಾಕಿಸ್ತಾನಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು.

 

1998-1999ರ ಚಳಿಗಾಲದಲ್ಲಿ ಪಾಕಿಸ್ತಾನಿ ಸೇನೆಯು ಸಿಯಾಚಿನ್ ಗ್ಲೇಸಿಯರ್ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಕಾರ್ಗಿಲ್ ಬಳಿ ರಹಸ್ಯವಾಗಿ ತನ್ನ ಯೋಧರಿಗೆ ತರಬೇತಿ ನೀಡಿತ್ತು. ಅಲ್ಲದೇ ಸೇನೆಯನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಆರಂಭಿಸಿತ್ತು. ಈ ಕುರಿತು ಪ್ರಶ್ನಿಸಿದಾಗ, ಅವರು ಪಾಕಿಸ್ತಾನದ ಯೋಧರದಲ್ಲಿ ಇಂಡಿಯನ್ ಮುಜಾಹಿದ್ದೀನ್ ಎಂದು ಸಮಜಾಯಿಸಿ ನೀಡಿತ್ತು. ಪಾಕಿಸ್ತಾನದ ಉದ್ದೇಶವೇ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ತನ್ನತ್ತ ಸೆಳೆಯುವುದಾಗಿತ್ತು. ಆ ಮೂಲಕ ಭಾರತೀಯ ಸೇನೆಯ ಮೇಲೆ ಒತ್ತಡ ತಂದು, ಸಿಯಾಚಿನ್ ಪ್ರದೇಶದಿಂದ ಯೋಧರನ್ನ ಭಾರತವು ವಾಪಸ್ ಕರೆಯಿಸಿಕೊಳ್ಳುವ ಹುನ್ನಾರವನ್ನು ಪಾಕಿಸ್ತಾನ ಮಾಡಿತ್ತು. ಅಲ್ಲದೇ, ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಭಾರತದ ಮೇಲೆ ಒತ್ತಡ ತರುವುದು ಉದ್ದೇಶವಾಗಿತ್ತು.

1971ರ ಇಂಡೋ-ಪಾಕ್ ಯುದ್ಧದ ಬಳಿಕ ಉಭಯ ರಾಷ್ಟ್ರಗಳ ನಡುವೆ ಅನೇಕ ಸೇನಾ ಸಂಘರ್ಷಗಳು ಸಂಭವಿಸಿವೆ. ಎರಡೂ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಿವೆ. 1999 ಫೆಬ್ರವರಿಯಲ್ಲಿ ಪಾಕಿಸ್ತಾನ ಮತ್ತು ಭಾರತಗಳೆರಡೂ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಅನ್ವಯ ಕಾಶ್ಮೀರ ಸಂಘರ್ಷವನ್ನು ದ್ವಿಪಕ್ಷೀಯ ಹಾಗೂ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದಾಗಿತ್ತು.

 

ಭಾರತದ ಗಡಿಯೊಳಗೆ ನುಗ್ಗಿ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಈ ಕ್ರಿಯೆಗೆ ಪಾಕಿಸ್ತಾನವು ಆಪರೇಷನ್ ಭದ್ರ್ ಎಂದು ಹೆಸರಿಟ್ಟಿತ್ತು. ಇದರ ಮುಖ್ಯ ಉದ್ದೇಶವೇ ಲಡಾಕ್ ಮತ್ತು ಕಾಶ್ಮೀರದ ನಡುವಿನ ಸಂಪರ್ಕರವನ್ನು ಕಡಿತಗೊಳಿಸುವುದು ಮತ್ತು ಸಿಯಾಚಿನ್ ಪ್ರದೇಶದಿಂದ ಭಾರತೀಯ ಸೇನೆ ವಾಪಸ್ ಹೋಗುವಂತೆ ಮಾಡುವುದಾಗಿತ್ತು. ಅಲ್ಲದೇ, ಈ ಪ್ರದೇಶದಲ್ಲಿ ಉದ್ಭವವಾಗುವ ಯಾವುದೇ ಕದಲಿಕೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿತ್ತು. ಅದೇ ಉದ್ದೇಶದಿಂದ ಪಾಕಿಸ್ತಾನವು ಭಾರತದ ಗಡಿಯೊಳಗೇ ತನ್ನ ಸೈನಿಕರನ್ನು ಕಳುಹಿಸಿತ್ತು. ಆದರೆ, ಭಾರತೀಯ ಸೇನೆಯು ಈ ಎಲ್ಲ ಸೈನಿಕರನ್ನು ಸದೆ ಬಡಿಯಿತು. ಅಲ್ಲದೇ ಪಾಕಿಸ್ತಾನದ ಹುನ್ನಾರವನ್ನು ಜಗಜ್ಜಾಹೀರು ಮಾಡಿತು.

 

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಪಾತ್ರ ನಿರ್ವಹಿಸಿತು. ಮಿಗ್-2ಐ, ಮಿಗ್-23ಸ್, ಮಿಗ್-27ಎಸ್, ಜಾಗ್ವಾರ್ ಮತ್ತು ಮಿರಾಜ್ 2000 ಯುದ್ಧವಿಮಾನಗಳನ್ನು ಪರಿಣಾಮಕಾರಿಯಾಗಿ ಬಳಸಲಾಯಿತು. ಮಿಗ್ 21 ಮತ್ತು ಮಿಗ್ 23 ಹಾಗೂ ಮಿಗ್ 27 ಮೂಲಕ ಪಾಕಿಸ್ತಾನದ ಅನೇಕ ಟಾರ್ಗೆಟ್‌ಗಳನ್ನು ನಾಶ ಮಾಡಲಾಯಿತು. ಹಾಗಾಗಿ, ಯುದ್ಧದ ವೇಳೆ ಆಪರೇಷನ್ ಸುರಕ್ಷಿತ್ ಸಾಗರಕ್ಕಾಗಿ ವಾಯುಪಡೆಯು ಮಿಗ್ 21 ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

 

ಕಾರ್ಗಿಲ್ ಯುದ್ಧದ ವೇಳೆ ರಾಕೆಟ್ಸ್, ಬಾಂಬ್‌ಗಳನ್ನು ಬಳಸಲಾಯಿತು. ಎರಡೂವರೆ ಲಕ್ಷ ಶೆಲ್, ಬಾಂಬ್ ಮತ್ತು ರಾಕೆಟ್‌ಗಳ ಮೂಲಕ ದಾಳಿ ನಡೆಸಲಾಯಿತು. ಸರಿಸುಮಾರು 5,000 ಫಿರಂಗಿ ಶೆಲ್‌ಗಳು, ಮಾರ್ಟರ್ ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಪ್ರತಿದಿನ 300 ಬಂದೂಕುಗಳು, ಮಾರ್ಟರ್‌ಗಳು ಮತ್ತು ಎಂಬಿಆರ್‌ಎಲ್‌ಗಳಿಂದ ಹಾರಿಸಲಾಯಿತು ಮತ್ತು ಟೈಗರ್ ಹಿಲ್ ಅನ್ನು ಮರಳಿ ಪಡೆದ ದಿನ 9,000 ಶೆಲ್‌ಗಳನ್ನು ಹಾರಿಸಲಾಯಿತು.

 

ಕಾರ್ಗಿಲ್ ಯುದ್ಧ ವೇಳೆ ಸುಮಾರು 527 ಯೋಧರು ಬಲಿದಾನ ಮಾಡಿದರು. 1300ಕ್ಕೂ ಅಧಿಕ ಯೋಧರು ಗಾಯಗೊಂಡರು. ಸಾಕಷ್ಟು ಸಾವು ನೋವು ಸಂಭವಿಸಿತು. ಆದರೂ, ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತೀಯ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾದಾಡಿದರು. ಪಾಕಿಸ್ತಾನದ ಸೇನೆಗೆ ಸರಿಯಾದ ಪಾಠವನ್ನು ಕಲಿಸಿದರು.

 ಈ ರೀತಿ ಹುತಾತ್ಮರಾದ 527 ಭಾರತೀಯ ಸೈನಿಕರ ಬಲಿದಾನದ ಫಲವಾಗಿ ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆ ಸೈನಿಕರ ಗೌರವದ ದಿನ ಇಂದು ಕಾರ್ಗಿಲ್ ವಿಜಯ ದಿವಸ್. ಆ ಮಹಾನ್ ಸೈನಿಕರಿಗೆ ನಮ್ಮ ಶೃದ್ಧಾಂಜಲಿ ಇರಲಿ.
Powered by Blogger.