".

Header Ads

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

 


 ಮೂರು ದಿನಗಳಿಂದ ನಿರಂತರವಾಗಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ನದಿಗಳು ಅಪಾಯ ಮಟ್ಟ ಮೀರಿ ಹರಿದು ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲಿಯೂ ಅಘನಾಶಿನಿ ನದಿಯ ನೆರೆಗೆ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಮುಂಜಾಗೃತಾ ಕ್ರಮವಾಗಿ ಮಂಗಳವಾರವೂ ಕೂಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ.

ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಶರಾವತಿ, ವರದಾ ಕಾಳಿ ನದಿ ತುಂಬಿ ಹರಿಯಲಾರಂಭಿಸಿವೆ. ಘಟ್ಟದ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಲ್ಲದೆ ಗಂಗಾವಳಿ ಹಾಗೂ ಅಘನಾಶಿನಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತುವೆ. ಇದರಿಂದಾಗಿ ನದಿ ತೀರದ ಪ್ರದೇಶಗಳು ಬಹುತೇಕ ಜಲಾವೃತವಾಗಿದ್ದು, ಜನಜಾನುವಾರುಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ಇನ್ನು ಅಘನಾಶಿನಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ನೀರಿನ‌ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದು ನದಿ ತೀರದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಸೆಂಟ್ರಲ್ ವಾಟರ್ ಕಮಿಷನ್ ಮಾಹಿತಿಯ ಪ್ರಕಾರ, ಅಘನಾಶಿನಿಯ ಅಪಾಯ ಮಟ್ಟ 17 ಮೀಟರ್‌ ಎಂದು ನಿಗದಿಪಡಿಸಲಾಗಿದ್ದು, ಸೋಮವಾರ ಈ ಮಟ್ಟ 17.60 ಮೀಟರ್‌ಗೆ ಏರಿಕೆಯಾಗಿದೆ.

ಶಿರಸಿ- ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡದ ಮಣ್ಣು ರಸ್ತೆಗೆ ಕುಸಿಯುತ್ತಿರುವುದು ಸಂಚಾರಕ್ಕೆ ಅಡೆತಡೆಯಾಗಿದೆ. ಸದ್ಯ ಈ ಮಾರ್ಗದಲ್ಲಿ ಭಾರೀ ವಾಹನಗಳ ಓಡಾಟ ಕಷ್ಟವಿದ್ದು, ಲಘು ವಾಹನಗಳಿಗೆ ಸಂಚರಿಸಲು ಪೊಲೀಸರು ಅವಕಾಶ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಶಿರಸಿ ಮತ್ತು ಕುಮಟಾದಿಂದ ಸಾಗುವವರಿಗೆ ಬದಲಿ ಮಾರ್ಗಗಳನ್ನು ಬಳಸುವಂತೆಯೂ ಸೂಚಿಸಲಾಗಿದೆ.

ಅಲ್ಲದೆ ಹವಮಾನ ಇಲಾಖೆ ಇನ್ನೂ ಐದು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ.ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದಕ್ಷಿಣ ಕನ್ನಡದ ಪ್ರಮುಖ ನದಿ ನೇತ್ರಾವತಿ ನದಿಯಲ್ಲಿ ಶನಿವಾರದಿಂದ ನೀರಿ‌ನ ಮಟ್ಟ ಏರುತ್ತಲೇ ಸಾಗಿದ್ದು ಭಾನುವಾರ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.ನೇತ್ರಾವತಿ ನದಿಯಲ್ಲಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇದೀಗ ಅಪಾಯದ ಮಟ್ಟವನ್ನು (8.6) ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳ ಜನರು ನೆರೆ ಭೀತಿಯನ್ನು ಎದುರಿಸುತ್ತಿದ್ದಾರೆ. ನೀರಿನ ಮಟ್ಟ ಏರುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಹೊರನಾಡು ಸಂಪರ್ಕ ಕಡಿದು ಹೋಗಿದೆ.
ಇದರಿಂದ ಸಂಪರ್ಕ ಕಳೆದುಕೊಂಡ ಹತ್ತಾರು ಹಳ್ಳಿಯ ಜನರು 8-10 ಕಿ.ಮೀ. ಸುತ್ತಿಕೊಂಡು ಪ್ರಯಾಣಿಸಬೇಕಾಯಿತು.ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಭಾರೀ ಗಾಳಿ-ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ.ವರದಾ ನದಿಯು ಸಾಗರ ಮತ್ತು ಸೊರಬದಲ್ಲಿ ನೆರೆ ಸೃಷ್ಟಿಸಿದೆ. ಸಾವಿರಾರು ಎಕರೆ ಗದ್ದೆ ತೋಟ ಜಲಾವೃತವಾಗಿವೆ. ಗಾಳಿ, ಮಳೆಗೆ ಮರ ಮತ್ತು ರೆಂಬೆಗಳು ವಿದ್ಯುತ್‌ ಮಾರ್ಗಗಳ ಮೇಲೆ ಉರುಳಿವೆ. ಕೆಲವೆಡೆ ವಿದ್ಯುತ್‌ ಕಂಬಗಳೇ ಧರೆಗುರುಳಿವೆ. ದುರಸ್ತಿಗೂ ಅವಕಾಶವಾಗದಂತೆ ಮಳೆ ಸುರಿಯುತ್ತಿದ್ದು, ನೂರಾರು ಹಳ್ಳಿಗಳು ನಾಲ್ಕೈದು ದಿನಗಳಿಂದ ಕತ್ತಲಲ್ಲಿಉಳಿದಿವೆ. ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ.

ಸಕಲೇಶಪುರ ತಾಲೂಕು ಬಿಸಿಲೆ ಮಾರ್ಗದ ಹಡ್ಲಗದ್ದೆ ರಸ್ತೆಯಲ್ಲಿ ಭೂ ಕುಸಿತದಿಂದ ಸಂಚಾರ ಸ್ಥಗಿತವಾಗಿದೆ. ಮಾಗೇರಿ ಸೇತುವೆ ಮುಳುಗಿದ್ದು, ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಮಾರ್ಗದ ಅಲ್ಲಲ್ಲಿ ಭೂ ಕುಸಿತದ ಆತಂಕ ಮುಂದುವರಿದಿದೆ. ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದೇ ಸಮಸ್ಯೆಗೆ ಕಾರಣ ಎಂಬುದು ಸ್ಥಳೀಯರ ಆರೋಪ. ಹೀಗಾಗಿ, ವಾಹನ ಸವಾರರು ಪರದಾಡುತ್ತಿದ್ದಾರೆ.
ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಾರಂಗಿಯಿಂದಲೂ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಕಾವೇರಿ ಮತ್ತು ಹಾರಂಗಿ ಸಂಗಮದಿಂದ ಕುಶಾಲನಗರ ಮತ್ತು ಕೊಪ್ಪ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.ಕಾವೇರಿ, ಸುಜ್ಯೋತಿ, ಕನ್ನಿಕೆ ನದಿಗಳು ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ, ತಾವೂರು ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಎಕರೆ ಗದ್ದೆಗಳಿಗೆ ನದಿ ನೀರು ನುಗ್ಗಿದ್ದು, ಭಗಂಡೇಶ್ವರ ದೇವಾಲಯದ ಒಳಭಾಗಕ್ಕೆ ನೀರು ಆವರಿಸಲು ಇನ್ನೂ ಒಂದು ಮೆಟ್ಟಿಲಷ್ಟೇ ಬಾಕಿಯಿದೆ.ಕೃಷ್ಣಾ ಮತ್ತು ತುಂಗಾಭದ್ರಾ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ.

ರಾಯಚೂರು, ಶಿವಮೊಗ್ಗ, ಬೆಳಗಾವಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ತುಂಗಾಭದ್ರಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿವೆ. ನದಿ ದಂಡೆಗೆ ಜನ, ಜಾನುವಾರುಗಳನ್ನು ಬಿಡದಂತೆ ಮುಂಜಾಗೃತಾ ಕ್ರಮವಾಗಿ ಡಂಗುರ ಮತ್ತು ಮೈಕುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಕೂಡ ನೆರೆ ಹಾವಳಿಯಿಂದ ಜಿಲ್ಲೆಯ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.


Powered by Blogger.