ಮಣಿಪಾಲದ ಕಂಟ್ರಿ ಇನ್‌ನಲ್ಲಿ ಪ್ರಬುದ್ದರ ಗೋಷ್ಠಿ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ
ಜಿಲ್ಲೆಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಡುಪಿಯ ಪ್ರವಾಸಿ ಬಂಗಲೆಯಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಕಂಟ್ರಿ ಇನ್ ಹೊಟೇಲ್ ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ್ದಾರೆ, ಕೊರೊನಾ ಕಾಲಘಟ್ಟದ ಸಂದಿಗ್ಧ ಪರಿಸ್ಥಿತಿ ಸಹಿತವಾಗಿ ಕಳೆದ 9 ವರ್ಷಗಳಿಂದ ಕೇಂದ್ರ ಸರಕಾರವು ದೇಶದ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಎಲ್ಲ ವ್ಯವಸ್ಥೆ ಮಾಡಿದೆ ಮತ್ತು ದೇಶವು ಸೇವೆಯ ಉತ್ಕೃಷ್ಟತೆಯನ್ನು ಕಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ಹೇಳಿದರು.
50-60 ವರ್ಷಗಳಿಂದ ಬಡತನ ನಿರ್ಮೂಲನೆ ಘೋಷಣೆಯಾಗಿತ್ತು. 2013ರ ಅನಂತರದಲ್ಲಿ ಜನರ ಜೀವನ ಮಟ್ಟ ಬದಲಾಗಿದೆ. ಮನೆ ಮನೆಗೆ ನೀರು, ಗ್ಯಾಸ್, ಶೌಚಾಲಯದ ವ್ಯವಸ್ಥೆಯಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆ, ಜನೌಷಧದ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಔಷಧ ಒದಗಿಸುವುದು ಸೇರಿದಂತೆ ಜನರ ಮೂಲ ಸೌಕರ್ಯ ಸುಧಾರಿಸಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮದು ಭ್ರಷ್ಟಾಚಾರ ಇಲ್ಲದ ಶುದ್ಧ ಸರಕಾರ. ಅನುದಾನ ಬಳಕೆಯಲ್ಲೂ ಯಾವುದೇ ಲೋಪವಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಅನುದಾನದ ಹಂಚಿಕೆ ಮತ್ತು ಬಳಕೆಗೆ ಸರಿಯಾದ ಕ್ರಮ ಅನುಸರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು.
ಪ್ರಬುದ್ಧರ ಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲಹೊತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸಹಿತವಾಗಿ ಕೈಗಾರಿಕೆ, ಲೆಕ್ಕಪರಿಶೋಧನೆ, ಮಹಿಳಾ ಉದ್ಯಮೆ ಮೊದಲಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅನಂತರ ವಿವಿಧ ಸಂಘಟನೆಗಳಿಂದ ಮನವಿ ಸ್ವೀಕರಿಸಿದರು.

Post a Comment