ಮುಂಬೈ: - ಏಕನಾಥ್ ಶಿಂಧೆ ಭಿನ್ನ ನಡೆ, ಭೂಕುಸಿತದಲ್ಲಿ ಅನಾಥರಾದ ಮಕ್ಕಳನ್ನು ದತ್ತು ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ
ಭೂಕಂಪ ಸಂಭವಿಸಲಿ, ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಲಿ, ದಂಗೆಯೇ ನಡೆಯಲಿ, ಹೆಚ್ಚಿನ ರಾಜಕಾರಣಿಗಳು ಭಾವುಕರಾಗುವುದಿಲ್ಲ. ಅವರು ನಿರ್ಭಾವುಕರಾಗಿ ವರ್ತಿಸುವ ಕಾರಣದಿಂದಲೇ ಅವರಲ್ಲಿ ಸೂಕ್ಷ್ಮತೆ, ಮಾನವೀಯತೆಯೂ ಇಲ್ಲವೇನೋ ಎನಿಸುತ್ತದೆ. ಹೆಚ್ಚಿನ ಜನ ಹಾಗೆಯೇ ಭಾವಿಸುತ್ತಾರೆ.
ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಿನ್ನ ನಡೆ ಅನುಸರಿಸಿದ್ದಾರೆ. ರಾಯಗಢದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ದತ್ತುಪಡೆಯಲು ತೀರ್ಮಾನಿಸಿದ್ದಾರೆ.
“ರಾಯಗಢದ ಇರ್ಷಲ್‌ವಾಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ತಂದೆ-ತಾಯಿಯನ್ನು ಕಳೆದುಕೊಂಡ ಎಲ್ಲ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿದ್ದೇನೆ. ಎರಡು ವರ್ಷದಿಂದ 14 ವರ್ಷದೊಳಗಿನ ಎಲ್ಲ ಮಕ್ಕಳ ಸಂಪೂರ್ಣ ಹೊಣೆ ನನ್ನದು” ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.
“ಮಕ್ಕಳ ಶಿಕ್ಷಣ ಸೇರಿ ಎಲ್ಲ ಖರ್ಚು-ವೆಚ್ಚಗಳನ್ನು ಶ್ರೀಕಾಂತ್ ಶಿಂಧೆ ಫೌಂಡೇಷನ್ ನೋಡಿಕೊಳ್ಳುತ್ತದೆ. ಏಕನಾಥ್ ಶಿಂಧೆ ಫೌಂಡೇಷನ್‌ಅನ್ನು ಏಕನಾಥ್ ಶಿಂಧೆ ಅವರ ಮಗ ಮುನ್ನಡೆಸುತ್ತಿದ್ದಾರೆ. ಪ್ರತಿಯೊಂದು ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿ ಇಡಲಾಗುತ್ತದೆ. ಆ ಹಣವನ್ನು ಅವರ ಶಿಕ್ಷಣ ಸೇರಿ ಹಲವು ಖರ್ಚುಗಳಿಗೆ ಬಳಸಿಕೊಳ್ಳಲಾಗುತ್ತದೆ” ಎಂದು ಏಕನಾಥ್ ಶಿಂಧೆ ಅವರ ವಿಶೇಷ ಕರ್ತವ್ಯಾಧಿಕಾರಿ ಮಂಗೇಶ್ ಚಿವ್ಟೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರಬಲ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಮನೆಗಳು ಕುಸಿದಿದ್ದು, ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆಗೆ ಶನಿವಾರವೂ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ತಂದೆ-ತಾಯಿ ಇಬ್ಬರೂ ಮೃತಪಟ್ಟ ಕಾರಣ ಹಲವು ಮಕ್ಕಳು ಅನಾಥರಾಗಿವೆ. ಇವರನ್ನು ದತ್ತು ತೆಗೆದುಕೊಳ್ಳಲು ಮುಂದಾದ ಏಕನಾಥ್ ಶಿಂಧೆ ಅವರ ಕುರಿತು ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ.
Post a Comment