".

Header Ads

ಮುಂಬೈ :- 4 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು

 


 ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೂರ್ವ ಡೊಂಬಿವಿಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಥಿಲಗೊಂಡಿದ್ದ ಈ ಕಟ್ಟಡವನ್ನು 'ಅಪಾಯಕಾರಿ' ಎಂದು ನಗರಸಭೆ ಅಧಿಕಾರಿಗಳು ಈ ಹಿಂದೆಯೇ ಘೋಷಿಸಿದ್ದರು.

ಕಲ್ಯಾಣ ಡೊಂಬಿವಿಲಿ ನಗರಸಭೆ ವ್ಯಾಪ್ತಿಯ ಅಯರೆ ಪ್ರದೇಶದಲ್ಲಿರುವ 'ಆದಿನಾರಾಯಣ್ ಭುವನ್‌' ಎನ್ನುವ ಈ ಕಟ್ಟಡದಲ್ಲಿ 44 ಬಾಡಿಗೆದಾರು ಇದ್ದರು. ಗುರುವಾರ ಕಟ್ಟಡದ ಕೆಲ ಭಾಗಗಳು ಕುಸಿದು ಬಿದ್ದಿದ್ದರಿಂದ ಅವರನ್ನು ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ 5.40ರ ವೇಳೆಗೆ ಕಟ್ಟಡ ಕುಸಿದು ಬಿದ್ದಿದೆ. ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ರಾತ್ರಿ ಸುಮಾರು 8 ಗಂಟೆಯ ವೇಳೆ ಸುನಿಲ್ ಬ್ರಿಜಾ ಲೊಡಯಾ (55) ಎಂಬವರ ಮೃತದೇಹವನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ.

ರಾತ್ರಿ 9.15ರ ವೇಳೆಗೆ 54 ವರ್ಷದ ದೀಪ್ತಿ ಸುನಿಲ್ ಲೊಡಯಾ ಎಂಬವರನ್ನು ಅವಶೇಷಗಳ ಅಡಿಯಿಂದ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ 70 ವರ್ಷದ ಅರವಿಂದ ಭಟ್ಕರ್‌ ಎಂಬವರ ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ.

Powered by Blogger.