ಸ್ವರ್ಗಕ್ಕೆ ಹೋದರೋ, ನರಕಕ್ಕೆ ಹೋದರೋ,:- ಬರಹ:- ಆಶಾ ನಾಗಭೂಷಣ
ಒಬ್ಬ ಸನ್ಯಾಸಿ ಇದ್ರು ಅವರು ಎಲ್ಲೆಡೆ ಸಂಚರಿಸುತ್ತಿದ್ದರು. ಇವತ್ತು ಒಂದುಕಡೆಯಾದರೆ ನಾಳೆ ಇನ್ನೆಲ್ಲೋ ಹೇಗೆ ಅವರು ಅಲ್ಲಿ ಇಲ್ಲಿ ತಿರುಗುತ್ತಾ ಒಂದು ಹಳ್ಳಿಗೆ ಬಂದರು. ಆ ಹಳ್ಳಿಯಲ್ಲಿ ಒಂದಷ್ಟು ಮನೆಗಳಿದ್ದವು. ಸನ್ಯಾಸಿಗಳಿಗೆ ಆ ಮನೆ ಈ ಮನೆಯ ಅಂತ ಏನು ಇಲ್ಲ. ಯಾರ ಮನೆಯ ಮುಂದೆ ಜಗುಲಿ ಇರುತ್ತದೆಯೋ ಅಲ್ಲಿಗೆ ಹೋಗುತ್ತಿದ್ದರು. ಬಾಗಿಲು ಬಡಿದು ತೊಂದರೆ ಕೊಡುತ್ತಿರಲಿಲ್ಲ. ಇಂದು ಸಹ ಹಳ್ಳಿಗೆ ಬಂದ ಮೇಲೆ ಕತ್ತಲಾಗಿತ್ತು ಯಾವುದಾದರೂ ಮನೆಯ ಮುಂದೆ ಜಗಲಿ ಇದ್ದರೆ ಇಂದು ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ ಹೊರಟರಾಯ್ತು ಎಂದುಕೊಂಡು ಜಗಲಿ ಕಂಡ ಮನೆಗೆ ಹೋದರು. ಒಳಗಿನ ಮಾತು ಕೇಳಿದರೆ, ಅಜ್ಜಿ ,ಮೊಮ್ಮಗಳು ಇದ್ದಾರೆ ಎಂದು ತಿಳಿಯಿತು. ಅವರು ತಂದುಕೊಂಡಿದ್ದ ಬಟ್ಟೆ ಗಂಟು ತೆಗೆದು, ಹಣ್ಣು ತಿಂದು ಒಂದು ಪಂಚೆ ಹಾಸಿಕೊಂಡು, ಇನ್ನೊಂದು ಹೊದ್ದುಕೊಂಡು, ಅದೇ ಗಂಟನ್ನು ತಲೆಗಿಟ್ಟುಕೊಂಡು ಮಲಗಿದರು.
ಸುಮಾರು ಬೆಳಗಿನ ಜಾವ ನಾಲ್ಕು ಗಂಟೆ ಇರಬಹುದು, ಯಾರೋ ಒಬ್ಬರು ಬಂದರು ಬಾಗಿಲು ಬಡಿದರು. ಒಳಗಿದ್ದ ಅಜ್ಜಿ ಬಂದು ಬಾಗಿಲು ತೆಗೆದರು.ಬಂದವರು ಒಳಗಡೆ ಹೋಗಿ ಒಂದಷ್ಟು ಹೊತ್ತು ಮಾತಾಡಿದರು. ಮಾತಿನ ಮಧ್ಯೆ ಅಯ್ಯೋ ಹೌದಾ, ಓ ಹಂಗಾಯಿತಾ, ಎಷ್ಟೊತ್ತಿಗೆ, ಈಗ ಸ್ವಲ್ಪ ಹೊತ್ತಾಯ್ತು, ಪಾಪ ಒಳ್ಳೆ ಮನುಷ್ಯ, ಹೊರಗೆ ಜಗಲಿಯಲ್ಲಿ ಸನ್ಯಾಸಿಗಳು ಮಲಗಿದ್ದಲ್ಲಿಂದಲೇ ಕೇಳಿಸಿಕೊಂಡರು. ಊರಲ್ಲಿ ಯಾರೋ ಹೋಗಿದ್ದಾರೆ
ಅಂತ ತಿಳಿಯಿತು. ಬಂದವರು ಹೊರಟು ಹೋದರು.
ತಕ್ಷಣ ಅಜ್ಜಿ ಮೊಮ್ಮಗಳನ್ನು ಎಬ್ಬಿಸಿ, ಪುಟ್ಟಾ ಒಂಚೂರು ಹೋಗಿ ನೋಡ್ಕೊಂಡು ಬಾ, ಕಡೆ ಮನೆಯ ರಾಮಣ್ಣ ಹೋಗಿ ಬಿಟ್ರಂತೆ, ನೀನು ಹೋಗಿ ಅವ್ರು "ಸ್ವರ್ಗಕ್ಕೆ ಹೋದರೋ, ನರಕಕ್ಕೆ ಹೋದರೋ"
ನೋಡಿಕೊಂಡು ಬಾ ಎಂದು ಮೊಮ್ಮಗಳನ್ನು ಎಬ್ಬಿಸಿ ಕಳಿಸಿದರು. ಹೊರಗಡೆಯೇ ಸನ್ಯಾಸಿಗಳು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ ಮಗ್ಗುಲಾಗಿ ಮಲಗಿದ್ದವರಿಗೆ ಅವರ ಮಾತುಗಳನ್ನು ಕೇಳಿ ಆಶ್ಚರ್ಯವಾಯಿತು. ರಾಮಣ್ಣ ಅನ್ನುವವರು ಹೋದ್ರು ಅಂತ ಗೊತ್ತಾಯ್ತು, ಆದರೆ ಅವರು ಸ್ವರ್ಗಕ್ಕೆ ಹೋದರೋ, ನರಕಕ್ಕೆ ಹೋದರೋ, ಇದು ಹೇಗೆ ಗೊತ್ತಾಗುತ್ತೆ? ಅಂದುಕೊಂಡರು. ಮೊಮ್ಮಗಳು, ಅಜ್ಜಿ ಬಾಗಿಲು ಹಾಕ್ಕೊ ನಾನು ಹೋಗಿ ನೋಡಿಕೊಂಡು ಬರ್ತೀನಿ ಅಂತ ಅಲ್ಲಿಗೆ ಹೊರಟಿತು.ಸ್ವಲ್ಪ ಹೊತ್ತಿಗೆ ಮೊಮ್ಮಗಳು ವಾಪಸ್ಸು ಬಂದಳು, ಅಜ್ಜಿ ಬಾಗಿಲು ತೆಗೆದು ಪುಟ್ಟಿ ರಾಮಣ್ಣ ಸ್ವರ್ಗಕ್ಕೆ ಹೋದರೋ, ನರಕಕ್ಕೆ ಹೋದರೋ, ಅಂತ ಕೇಳಿದರು. ಆಗ ಹುಡುಗಿ, ಅಜ್ಜಿ ಅವರ್ಯಾಕೆ ನರಕಕ್ಕೆ ಹೋಗ್ತಾರೆ ರಾಮಣ್ಣ ಸ್ವರ್ಗಕ್ಕೆ ಹೋದ್ರು ಅಂದಳು. ಅವರು ಸ್ವರ್ಗಕ್ಕೆ ಹೋಗ್ತಾರೆ ಅಂತ ನನಗೆ ಮೊದಲೇ ಗೊತ್ತಿತ್ತು ಎಂದು ಅಜ್ಜಿ ಹೇಳಿದರು. ಹೊರಗಡೆ ಮಲಗಿರುವ ಸನ್ಯಾಸಿಗಳಿಗೆ ತುಂಬಾ ಆಶ್ಚರ್ಯವಾಗಿ ಈ ಪುಟ್ಟ ಹುಡುಗಿಗೆ ಹೇಗೆ ಗೊತ್ತಾಯ್ತು? ಇದನ್ನು ಕೇಳುವ ಸಲುವಾಗಿ ಸ್ವಲ್ಪ ಬೆಳಕು ಹರಿಯುತ್ತಲೇ ಬಟ್ಟೆಗಳನ್ನೆಲ್ಲ ಗಂಟು ಕಟ್ಟಿಟ್ಟು ಹೊರಡುವ ಮೊದಲು ಒಳಗೆ ಬಂದು, ನಾನು ನೀವಿಬ್ಬರೂ ಬೆಳಗಿನ ಜಾವ ಮಾತಾಡಿದ್ದೆಲ್ಲ ಕೇಳಿಸಿಕೊಂಡೆ, ಎಂದು ಅಜ್ಜಿಗೆ ಹೇಳಿ ಪುಟ್ಟ ಹುಡುಗಿ ಕಡೆ ತಿರುಗಿ, ಅಲ್ಲ ಪುಟ್ಟಿ ರಾಮಣ್ಣ ಸ್ವರ್ಗಕ್ಕೆ ಹೋದರೋ ನರಕಕ್ಕೆ ಹೋದರೋ ಎನ್ನುವುದು ನಿನಗೆ ಹೇಗೆ ಗೊತ್ತಾಯ್ತು ಅಂತ ಕೇಳಿದರು.
ಆ ಹುಡುಗಿ ಅಯ್ಯೋ ಬಾಬಾ ಅದರಲ್ಲೇನಿದೆ ಗೊತ್ತಾಗೋಕೆ ಅವರ ಮನೆ ಮುಂದೆ ನೂರಾರು ಜನ ಸೇರಿದ್ದರು. ಎಲ್ಲರೂ ದುಃಖದಲ್ಲಿದ್ದರು, ಹೀಗಿರುವಾಗ ರಾಮಣ್ಣ ಸ್ವರ್ಗಕ್ಕೆ ಹೋಗದೆ ನರಕಕ್ಕೆ ಹೋಗಲು ಸಾಧ್ಯವೇ?
ರಾಮಣ್ಣ ಸ್ವರ್ಗಕ್ಕೇ ಹೋಗಿದ್ದಾರೆ ಎಂದು ಪುಟ್ಟಿ ಖಡಾಖಂಡಿತವಾಗಿ ಹೇಳಿದಳು.
ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ!
ದೇಹಿಮೇ ಕೃಪಯಾ ಶಂಭೋ. ತ್ವಯಂ ಭಕ್ತಿ ಮಚಂಚಲಾಂ!
Post a Comment