ಬೆಂಗಳೂರು ಕಂಬಳ ವೀಕ್ಷಿಸಿ ಹಿಂದಿರುಗುವಾಗ ಭೀಕರ ಅಪಘಾತ-ಮಂಗಳೂರಿನ ಇಬ್ಬರು ಮೃತ್ಯು..!
ಕಾರಿಗೆ ಬೋರ್ವೆಲ್ ಲಾರಿಯೊಂದು ಡಿಕ್ಕಿಯಾಗಿ ಬೆಂಗಳೂರು ಕಂಬಳ ನೋಡಿ ಹಿಂದಿರುಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನ ಕುಣಿಗಲ್ ಸಮೀಪ ಮುಂಜಾನೆ ನಡೆದಿದೆ.
ಮಂಗಳೂರು ಬಜಪೆ ಮೂಲದ ಕಿಶನ್ ಶೆಟ್ಟಿ (20), ದಕ್ಷಿಣ ಕನ್ನಡ ಜಿಲ್ಲೆ ಭಟ್ರತೋಟ ಗ್ರಾಮದ ಫಿಲಿಪ್ ನೇರಿ ಲೋಬೋ (32) ಸಾವನ್ನಪ್ಪಿದವರು.
ರಾಜ್ಯ ಹೆದ್ದಾರಿ 33ರಲ್ಲಿ ಘಟನೆ ನಡೆದಿದ್ದು, ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದ ಬಳಿ ಈ ದುರಂತ ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿ ಶನಿವಾರ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ತಮ್ಮ ಊರಿಗೆ ವಾಪಸಾಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕಿಶಾನ್ ಶೆಟ್ಟಿ ಮತ್ತು ಸ್ನೇಹಿತರು ನೆಲಮಂಗಲ ಮತ್ತು ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿದ್ದವರು ದಾರಿ ತಪ್ಪಿ ತುಮಕೂರು ನಗರಕ್ಕೆ ಹೋಗಿದ್ದಾರೆ. ಬಳಿಕ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ಹೋಗುವ ಸಂದರ್ಭ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ನಿತೀಶ ಭಂಡಾರಿ, ಪ್ರೀತಿ ಲೋಬೊ, ಹರೀಶ್ ಎಂಬವರು ತೀವ್ರ ಗಾಯಗಳೊಂದಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Post a Comment