ವಿಧಾನಪರಿಷತ್ ಟಿಕೆಟ್ ಮಿಸ್ – ಪಕ್ಷ ತೆಗೆದುಕೊಂಡಿರುವ ಈ ನಿಲುವಿಂದ ವಿಚಲಿತನಾಗಿದ್ದೇನೆ – ರಘುಪತಿ ಭಟ್
ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಘುಪತಿ ಭಟ್ ಪಕ್ಷದ ವಿರುದ್ದ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಕಳೆದ ಬಾರಿ ಎಂಎಲ್ಎ ಟಿಕೆಟ್ ವಂಚಿತನಾಗಿದ್ದ ಸಂದರ್ಭ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು, ಆದರೆ ಇದೀಗ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಘುಪತಿ ಭಟ್ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ.
1994 ರಿಂದಲೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರುತ್ತೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಬದಲಾಯಿಸಲಾಯಿತು.

Post a Comment