".

Header Ads

ಹರಿಣಗಳ ದಾಳಿಗೆ ಅಫ್ಘಾನ್ ವಿಲವಿಲ : ಕೊನೆಗೂ ಚೋಕರ್ಸ್ ದ.ಆಫ್ರಿಕಾ ಐಸಿಸಿ ಟಿ-20 ಫೈನಲ್ ಗೆ


ಅಘಾನಿಸ್ತಾನ ತಂಡವನ್ನು ಕೇವಲ 56 ರನ್ ಗಳಿಗೆ ಹೆಡೆಮುರಿ ಕಟ್ಟಿದ ದ. ಆಫ್ರಿಕಾ ತಂಡ ಇದೆ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಷಿಪ್ ಒಂದರ ಫೈನಲ್ ಗೆ ಲಗ್ಗೆಯಿಟ್ಟಿದೆ. ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ  2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯುತ್ತಿದ್ದು ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತಿದೆ. ಟ್ರಿನಿಡಾಡ್‌ನ ಬ್ರಿಯಾನ್‌ ಲಾರಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ಎದುರು ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಐಸಿಸಿ ವಿಶ್ವಕಪ್‌ ಅಖಾಡದಲ್ಲಿ ಮೊದಲ ಬಾರಿ ಫೈನಲ್‌ ತಲುಪಿದ ಸಾಧನೆ ಮೆರೆಯಿತು.

ಟೂರ್ನಿಯಲ್ಲಿ ಸತತ 8 ಜಯ ದಾಖಲಿಸಿರುವ ಏಡೆನ್‌ ಮಾರ್ಕ್ರಮ್‌ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ ಜೂನ್ 29ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಅಥವಾ ಇಂಗ್ಲೆಂಡ್‌ ಎದುರು ಕಾದಾಟ ನಡೆಸಲಿದೆ. ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಗಯಾನಾದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಬೇಕಿದೆ.

ಮಹತ್ವದ ಸೆಮಿಫೈನಲ್‌ ಪಂದ್ಯದಲ್ಲಿ ರಶೀದ್‌ ಖಾನ್‌ ಸಾರಥ್ಯದ ಅಫಗಾನಿಸ್ತಾನ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಮುಂದಾಯಿತು. ಆದರೆ, ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲಿಂಗ್‌ ದಾಳಿ ಎದುರು ದಿಟ್ಟ ಆಟವಾಡಲು ವಿಫಲವಾದ ಅಫ್ಘಾನ್‌ ಪಡೆ ಕೇವಲ 56 ರನ್‌ಗಳಿಗೆ ಆಲ್‌ಔಟ್‌ ಆಯಿತು. ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟರ್‌ಗಳ ವೈಫಲ್ಯ ಅಫಘಾನಿಸ್ತಾನ ತಂಡಕ್ಕೆ ನುಂಗಲಾರದ ತುತ್ತಾಯಿತು. ಹರಿಣ ಪಡೆಯ ಫಾಸ್ಟ್‌ ಬೌಲರ್‌ಗಳ ಅಬ್ಬರಕ್ಕೆ ಅಫ್ಘಾನಿ ಪಡೆ ತಲೆಬಾಗಿತು.

ದಕ್ಷಿಣ ಆಫ್ರಿಕಾ ತಂಡದ ಪರ ಟೂರ್ನಿಯುದ್ದಕ್ಕೂ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಎಡಗೈ ವೇಗದ ಬೌಲರ್‌ ಮಾರ್ಕೊ ಯನ್ಸನ್‌ ಸೆಮಿಫೈನಲ್‌ ಪಂದ್ಯದಲ್ಲಿ 3 ವಿಕೆಟ್‌ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ತಮ್ಮ 3 ಓವರ್‌ಗಳಲ್ಲಿ 16 ರನ್‌ ಮಾತ್ರವೇ ಕೊಟ್ಟು ಅಫಘಾನಿಸ್ತಾನ ತಂಡ ಸ್ಟಾರ್‌ ಬ್ಯಾಟರ್‌ಗಳಾದ ರೆಹಮಾನುಲ್ಲಾ ಗುರ್ಬಝ್‌ (0), ಗುಲ್ಬದಿನ್ ನೈಬ್ (9) ಮತ್ತು ನಂಗೆಯಾಲಿಯಾ ಖರೋಟೆ (2) ಅವರನ್ನು ಔಟ್‌ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ತಂದರು.


ಮಾರ್ಕೊ ಯನ್ಸನ್‌ಗೆ ಉತ್ತಮ ಸಾಥ್‌ ನೀಡಿದ ಫಾಸ್ಟ್‌ ಬೌಲರ್‌ಗಳಾದ ಕಗಿಸೊ ರಬಾಡ (14ಕ್ಕೆ 2) ಮತ್ತು ಎನ್ರಿಕ್‌ ನೊರ್ಕಿಯ (7ಕ್ಕೆ 2) ತಲಾ ಎರಡು ವಿಕೆಟ್‌ ಸಂಪಾದಿಸಿದರೆ, ಸ್ಪಿನ್‌ ಬಲೆ ಹೆಣೆದ ಚೈನಾಮನ್‌ ಶೈಲಿಯ ಮಾಂತ್ರಿಕ ಬೌಲರ್‌ ತಬ್ರೇಝ್‌ ಶಾಮ್ಸಿ 6ಕ್ಕೆ 3 ವಿಕೆಟ್‌ ಕಬಳಿಸಿ ಅಫಘಾನಿಸ್ತಾನ ತಂಡದ ಬ್ಯಾಟರ್‌ಗಳಿಗೆ ಖೆಡ್ಡ ತೋಡಿದರು.

ಮಳೆ ಕಾಟ ಕೊಡದೇ ಇದ್ದ ಕಾರಣ ಸೆಮಿಫೈನಲ್‌ ಪಂದ್ಯ ಯಾವುದೇ ಅಡ್ಡಿ ಇಲ್ಲದೆ ಆಯೋಜನೆ ಆಯಿತು. ಗೆಲುವಿಗೆ 57 ರನ್‌ಗಳ ಸುಲಭದ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿ ಓಪನರ್‌ ಕ್ವಿಂಟನ್‌ ಡಿ ಕಾಕ್‌ (5) ವಿಕೆಟ್‌ ಕಳೆದುಕೊಂಡಿತಾದರೂ, ಮತ್ತೊಬ್ಬ ಓಪನರ್‌ ರೀಝಾ ಹೆಂಡ್ರಿಕ್ಸ್‌ (25 ಎಸೆತಗಳಲ್ಲಿ 29 ರನ್‌) ಮತ್ತು ನಾಯಕ ಏಡೆನ್‌ ಮಾರ್ಕ್ರಮ್‌ (21 ಎಸೆತಗಳಲ್ಲಿ 23 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ 8.5 ಓವರ್‌ಗಳಲ್ಲಿ 60 ರನ್‌ ಬಾರಿಸಿ ಇತಿಹಾಸ ರಚಿಸಿತು.


Powered by Blogger.