ಒಂದೇ ರಾಜ್ಯದಲ್ಲಿ 828 ಕಾಲೇಜು ವಿದ್ಯಾರ್ಥಿಗಳಿಗೆ HIV ಪಾಸಿಟಿವ್! 47 ಮಂದಿ ಸಾವು!
ಕೆಲವೇ ಕೆಲವು ವಾರಗಳ ಅಂತರದಲ್ಲಿ ರಾಜ್ಯವೊಂದರ 828 ವಿದ್ಯಾರ್ಥಿಗಳಿಗೆ ಎಚ್‌ಐವಿ ಸೋಂಕು (HIV Positive) ತಗುಲಿದ್ದಲ್ಲದೇ, 47 ಮಂದಿ ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ಬಲಿಯಾಗಿರುವ (Death by Aids) ಆತಂಕಕಾರಿ ಘಟನೆ ವರದಿಯಾಗಿದೆ.
ಅಂದಹಾಗೆ ಈ ಆಘಾತಕಾರಿ ಘಟನೆ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ನಡೆದಿದ್ದು, ಈ ರಾಜ್ಯದಲ್ಲಿ 828 ವಿದ್ಯಾರ್ಥಿಗಳು ಎಚ್ ಐವಿ ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಎಚ್‌ಐವಿ ಪೀಡಿತ ಅನೇಕ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳು ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ತ್ರಿಪುರಾದಲ್ಲಿ ಎಚ್ ಐವಿ ಸೋಂಕಿಗೆ ಒಳಗಾಗಿರುವ 828 ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಶ್ರೀಮಂತ ಕುಟುಂಬದ ಹಿನ್ನೆಲೆಯುಳ್ಳವರು ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿಗಳು ಪೋಷಕರು ಸ್ಥಿತಿವಂತರಾಗಿದ್ದು, ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸಿದವರಾಗಿದ್ದಾರೆ. ಮಕ್ಕಳು ವಿದ್ಯಾಭ್ಯಾಸ ಗಳಿಸಲೆಂದು ದೂರದ ಊರಿಗೆ ಕಳುಹಿಸಿ ತಿಂಗಳಿಗೆ ಬೇಕಾದಷ್ಟು ಹಣವನ್ನು ಕಳುಹಿಸುತ್ತಾರೆ. ಅತ್ತ ವಿದ್ಯಾರ್ಥಿಗಳು ಕೆಟ್ಟ ದಾರಿ ಹಿಡಿಯುತ್ತಿದ್ದರು ಎನ್ನಲಾಗಿದೆ.
ಡ್ರಗ್ಸ್‌ನಿಂದ ಎಚ್‌ಐವಿ!
ಮೂಲಗಳ ಪ್ರಕಾರ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅದೂ ಒಂದೇ ರಾಜ್ಯದ ವಿದ್ಯಾರ್ಥಿಗಳಿಗೆ ಎಚ್‌ಐವಿ ಪಾಸಿಟಿವ್ ಬರಲು ಕಾರಣ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ಎನ್ನಲಾಗಿದೆ. ಯಾರ ಗಮನಕ್ಕೆ ಬಾರದಂತೆ ವಿದ್ಯಾರ್ಥಿಗಳ ಗುಂಪು ರಹಸ್ಯವಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಈ ವೇಳೆ ಸ್ನೇಹಿತರ ಜೊತೆ ಸಲುಗೆಯಿಂದ ಒಬ್ಬರ ಬಳಸಿದ ನೀಡಲ್, ಸಿರಿಂಜ್‌ಗಳನ್ನೇ ಇತರ ಸ್ನೇಹಿತರೂ ಬಳಸಿದ್ದಾರೆ. ಹೀಗಾಗಿ ಒಬ್ಬರ ಸಿರೆಂಜ್ ಮತ್ತೊಬ್ಬರು ಬಳಕೆ ಮಾಡುತ್ತಿರುವುದರಿಂದ ಎಚ್‌ಐವಿ ವೈರಾಣು ಅತಿ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತಿದೆ ಎಂದು ತಿಳಿದು ಬಂದಿದೆ.
ತ್ರಿಪುರಾ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿ -ಟಿಎಸ್‌ಎಸಿಎಸ್ ಡೇಟಾ ಪ್ರಕಾರ, TSACS ರಾಜ್ಯದ 220 ಶಾಲೆಗಳು, 24 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಗುರುತಿಸಿದೆ.ರಾಜ್ಯದಲ್ಲಿ 828 ವಿದ್ಯಾರ್ಥಿಗಳು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ತ್ರಿಪುರಾ ಜರ್ನಲಿಸ್ಟ್ಸ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್‌ಎಸಿಎಸ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಟಿಎಸ್‌ಎಸಿಎಸ್ ಜಂಟಿ ನಿರ್ದೇಶಕರು ಈ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದರು.
ಈ ಬಗ್ಗೆ ಮಾತನಾಡಿರುವ ಟಿಎಸ್‌ಎಸ್‌ಇಎಸ್ ಅಧಿಕಾರಿ, 'ನಾವು ಇದುವರೆಗೆ 828 ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಪಾಸಿಟಿವ್ ಕಂಡು ಬಂದಿರುವುದು ಗಮನಿಸಿದ್ದೇವೆ. ಅವರಲ್ಲಿ 572 ವಿದ್ಯಾರ್ಥಿಗಳು ಇನ್ನೂ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು 47 ಜನರು ಈ ಅಪಾಯಕಾರಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿತ ವಿದ್ಯಾರ್ಥಿಯು ಮತ್ತೊಂದು ವಿದ್ಯಾರ್ಥಿಗೆ ಚುಚ್ಚುಮದ್ದು ನೀಡಿದರೆ ರೋಗ ಹರಡುವ ಸಾಧ್ಯತೆಯಿದೆ. ಇಷ್ಟು ಮಾತ್ರವಲ್ಲದೆ, ಪ್ರತಿದಿನ ಸುಮಾರು ಐದರಿಂದ ಏಳು ಹೊಸ ಎಚ್‌ಐವಿ ಪ್ರಕರಣಗಳು ವರದಿಯಾಗುತ್ತಿವೆ ಎಂದು ಇತ್ತೀಚಿನ ಅಂಕಿಅಂಶಗಳು ತೋರಿಸುತ್ತವೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಆಂಟಿರೆಟ್ರೋವೈರಲ್ ಥೆರಪಿ ಸೆಂಟರ್‌ನ ಮಾಹಿತಿಯ ಪ್ರಕಾರ, ಮೇ 2024ರ ಹೊತ್ತಿಗೆ ತ್ರಿಪುರಾದಲ್ಲಿ ಎಚ್‌ಐವಿ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8,729 ಆಗಿದೆ. ಇವರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬ ಟ್ರಾನ್ಸ್‌ಜೆಂಡರ್ ಸೇರಿದಂತೆ 5,674 ಜನರು ಜೀವಂತವಾಗಿದ್ದಾರೆ ಎಂದು ವರದಿಯಾಗಿದೆ.
Post a Comment