ನಾಡಿನ ಸಮಸ್ತ ಜನರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು
ನಾಗರಪಂಚಮಿ ಹಬ್ಬಗಳ ತಿಂಗಳಾಗಿರುವ ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ. ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ, ಹೊಸ ಬಟ್ಟೆ-ಅಲಂಕಾರವನ್ನು ಧರಿಸಿ, ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ. “ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಿಸುವಂತಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣಗಳ ಶುದ್ಧಿಯಾಗಲಿ.’
ನಾಗರ ಪಂಚಮಿಯಂದು ಸಹೋದರಿಯ ಮೊರೆಯು ಈಶ್ವರನು ಆಲಿಸುತ್ತಾನೆ. ಆದುದರಿಂದ ಸಹೋದರಿಯು ತನ್ನ ಸಹೋದರನ ಉನ್ನತಿಗಾಗಿ ದೇವರಲ್ಲಿ ಕಳಕಳಿಯಿಂದ ಮುಂದಿನಂತೆ ಪ್ರಾರ್ಥಿಸಬೇಕು – ‘ದೇವರೇ, ನನ್ನ ಸಹೋದರನಿಗೆ ಸದ್ಬುದ್ಧಿ, ಶಕ್ತಿ ಮತ್ತು ಸಾಮರ್ಥ್ಯವನ್ನು ದಯಪಾಲಿಸಿ .
ನಾಗರಪಂಚಮಿ : ಇತಿಹಾಸ
1. ಸರ್ಪಯಜ್ಞದ ಸಮಾಪ್ತಿಯ ದಿನ : ಸರ್ಪಯಜ್ಞ ಮಾಡುತ್ತಿದ್ದ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿದ ಆಸ್ತಿಕ ಋಷಿಗಳು ಬೇಡಿದ ವರಕ್ಕನುಸಾರ ಜನಮೇಜಯ ರಾಜನು ಯಜ್ಞ ನಿಲ್ಲಿಸಿದನು, ಮತ್ತು ಆಸ್ತಿಕ ಋಷಿಗಳು ವಿಶ್ವದಲ್ಲಿನ ಎಲ್ಲ ನಾಗಗಳಿಗೆ ಅಭಯವನ್ನು ನೀಡಿದರು
2. ಕಾಲಿಯಾಮರ್ದನದ ತಿಥಿ : ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಯಮುನಾ ನದಿಯಲ್ಲಿದ್ದ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು.
3. 5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
4. ನಾಗಗಳು ಪರಮೇಶ್ವರನ ಅವತಾರಗಳೊಂದಿಗೆ, ಅಂದರೆ ಸಗುಣ ರೂಪದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರಕ್ಕೆ ವಾಸುಕೀ ಎಂಬ ನಾಗವು ಸಹಾಯವನ್ನು ಮಾಡಿತ್ತು. ಶ್ರೀವಿಷ್ಣು ಶೇಷನಾಗನ ಶಯ್ಯೆಯ ಮೇಲೆ ಮಲಗಿರುತ್ತಾನೆ. ಶ್ರೀವಿಷ್ಣು ರಾಮನಾಗಿ ಅವತರಿಸಿದಾಗ ಅದೇ ಶೇಷನಾಗನು ಲಕ್ಷ್ಮಣನ ಅವತಾರವನ್ನು ತಾಳಿದ್ದನು. ಭಗವಾನ ಶಿವನು ಮೈಮೇಲೆ ಒಂಬತ್ತು ನಾಗಗಳನ್ನು ಧರಿಸಿದ್ದಾನೆ.
5. ಶಿವನು ಹಾಲಾಹಲ ವಿಷ ಸೇವಿಸಿದಾಗ ಅವನಿಗೆ ಸಹಾಯ ಮಾಡಲು ಒಂಬತ್ತು ನಾಗಗಳು ಬಂದವು ಮತ್ತು ಅವುಗಳು ಸಹ ಹಾಲಾಹಲದ ಅಂಶವನ್ನು ಸೇವಿಸಿದವು. ಇದರಿಂದ ನಾಗಗಳ ಮೇಲೆ ಪ್ರಸನ್ನನಾದ ಶಿವನು ನಾಗಗಳು ಸಮಸ್ತ ಸೃಷ್ಟಿಯ ರಕ್ಷಣೆಯನ್ನು ಮಾಡಲು ನೀಡಿದ ಯೋಗದಾನಕ್ಕಾಗಿ ‘ಮನುಷ್ಯನು ಯಾವಾಗಲೂ ನಾಗಗಳ ಬಗ್ಗೆ ಕೃತಜ್ಞನಾಗಿದ್ದು ಅವನು ನಾಗಗಳ ಪೂಜೆಯನ್ನು ಮಾಡುತ್ತಾನೆ’, ಎಂಬ ಆಶೀರ್ವಾದವನ್ನು ನೀಡಿದನು. ಅಂದಿನಿಂದ ಒಂಬತ್ತು ನಾಗಗಳು ಮನುಷ್ಯನಿಗೆ ಪೂಜನೀಯವಾದವು. ಒಂಬತ್ತು ನಾಗಗಳು ಒಂಬತ್ತು ವಿಧದ ಪವಿತ್ರಕಗಳನ್ನು (ಚೈತನ್ಯಲಹರಿಗಳು) ಗ್ರಹಣ ಮಾಡುವ ಘಟಕಗಳಾಗಿವೆ. ಅವುಗಳ ಪೂಜೆಯಿಂದ ಚೈತನ್ಯ ಲಹರಿಗಳನ್ನು ಧಾರಣೆ ಮಾಡುವ ಸಮೂಹದ್ದೇ ಪೂಜೆಯಾಗುತ್ತದೆ.
Post a Comment