ತಾನೇ ಸಾಕಿದ ಬೆಕ್ಕು ಕಚ್ಚಿ ಮಹಿಳೆ ರೇಬಿಸ್ ಗೆ ತುತ್ತಾಗಿ ಸಾವು
ಮನೆಯಲ್ಲಿ ಅನೇಕ ಪ್ರಾಣಿ -ಪಕ್ಷಿಗಳನ್ನು ಬಹಳ ಪ್ರೀತಿಯಿಂದ ಸಾಕಲಾಗುತ್ತದೆ. ಎಷ್ಟೋ ಮನೆಗಳಲ್ಲಿ ನಾಯಿ ಇಲ್ಲವೇ, ಬೆಕ್ಕುಗಳನ್ನು ಪೋಷಿಸುತ್ತಾರೆ. ಅವುಗಳನ್ನು ಮನೆ ಮಕ್ಕಳಂತೆ ಬಹಳ ಪ್ರೀತಿಯಿಂದ ಮುದ್ದು ಮಾಡುತ್ತಾರೆ. ಕೆಲವೊಮ್ಮೆ ಆ ಪ್ರಾಣಿಗಳಿಂದ ಜೀವ ಹೋದ ಉದಾಹರಣೆಗಳೂ ಇವೆ. ಇದೀಗ ಅಂತಹುದೇ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ತರಲಘಟ್ಟ ಎಂಬಲ್ಲಿ ನಡೆದಿದೆ.ಗಂಗೀಬಾಯಿ(50) ಮೃತ ಮಹಿಳೆ. ಎರಡು ತಿಂಗಳ ಹಿಂದೆ ಸಾಕಿದ್ದ ಬೆಕ್ಕು ಕಚ್ಚಿದೆ. ಈ ಬೆಕ್ಕು ಅದಕ್ಕೂ ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿರುವ ಯುವಕನ ಮೇಲೆ ದಾಳಿ ಮಾಡಿತ್ತು. ಬಳಿಕ ಮಹಿಳೆ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿತ್ತು.
ಬೆಕ್ಕು ಕಚ್ಚಿದ ಪರಿಣಾಮ ಗಂಗೀಬಾಯಿ ರೇಬಿಸ್ ಕಾಯಿಲೆಗೆ ತುತ್ತಾಗಿದ್ದರು. ಬೆಕ್ಕು ಕಚ್ಚಿದ ಬಳಿಕ ಮಹಿಳೆ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ, ಒಂದು ಇಂಜೆಕ್ಷನ್ ಪಡೆದು ಆರೋಗ್ಯವಾಗಿದ್ದೇನೆ ಎಂದುಕೊಂಡ ಗಂಗೀಬಾಯಿ ಉಳಿದ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.ಮೊದಲ ಇಂಜೆಕ್ಷನ್ ಪಡೆದ ಬಳಿಕ ಗಂಗೀಬಾಯಿ ಆರೋಗ್ಯ ಚೇತರಿಸಿಕೊಂಡಿದೆ. ಬಳಿಕ ಆಕೆ ಗದ್ದೆಗೆ ನಾಟಿ ಮಾಡಲು ಹೋಗಿದ್ದಾರೆ. ನೀರು ಹಾಗೂ ಕೆಸರಿಗೆ ಇಳಿದ ಕಾರಣ ಬೆಕ್ಕು ಕಚ್ಚಿದ ಗಾಯ ಇನ್ನಷ್ಟು ಉಲ್ಬಣಗೊಂಡಿದೆ.

Post a Comment