ಬೈಕ್‌ಗೆ ಲಾರಿ ಡಿಕ್ಕಿ, ತುಂಬು ಗರ್ಭಿಣಿಯ ಹೊಟ್ಟೆ ಸೀಳಿ ಕಣ್ಣೆದುರಲ್ಲೇ ನಡು ರಸ್ತೆಯಲ್ಲಿ ಮಗು ವಿಲ ವಿಲ ಒದ್ದಾಡಿ ಮೃತ
ಅವರಿಬ್ಬರ ದಾಂಪತ್ಯ ಹಾಲು ಜೇನಿನಂತೆ ಸೇರಿ ಚೆನ್ನಾಗಿ ನಡೆಯುತ್ತಿತ್ತು. ಪ್ರೀತಿಯ ದ್ಯೋತಕವಾಗಿ ಆಕೆಯ ಹೊಟ್ಟೆಯೊಳಗೆ ಶಿಶುವೊಂದು ರೂಪ ಪಡೆದಿತ್ತು. ಇನ್ನೇನು 15 ದಿನ ಕಳೆದರೆ ಆ ಮಗು ಭೂಮಿಗೆ ಕಾಲಿಡುತ್ತಿತ್ತು. ಆದರೆ ಆ ದಂಪತಿಯ ಮೇಲೆ ಅದ್ಯಾರ ದೃಷ್ಟಿ ಬಿತ್ತೋ ಏನೋ, ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಗರ್ಭಿಣಿ ಮಹಿಳೆ ನವಜಾತ ಶಿಶು ಸಮೇತ ಸಾವನ್ನಪ್ಪಿದ್ದಾರೆ.
ಮುಖದ ಗುರುತೇ ಸಿಗದಂತೆ ನಜ್ಜುಗುಜ್ಜಾಗಿ ರಸ್ತೆಯಲ್ಲಿ ಬಿದ್ದಿದ್ದ ಪತ್ನಿಯ ಶವ, 15 ದಿನ ಕಳೆದರೆ ಭೂಮಿಯ ಬೆಳಕು ಕಾಣಬೇಕಾಗಿದ್ದ ಕಂದಮ್ಮ ಅವಧಿಗಿಂತ ಮುಂಚೆಯೇ ತಾಯಿಯ ಹೊಟ್ಟೆ ಸೀಳಿ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ಹೃದಯ ವಿದ್ರಾವಕ ಸನ್ನಿವೇಶ, ಇವೆಲ್ಲವನ್ನೂ ಕಂಡು ಆಕಾಶವೇ ಭೂಮಿಗೆ ಅಪ್ಪಳಿಸಿದಂತೆ ಪತ್ನಿಯ ಅಂಗೈ ಹಿಡಿದು ರಸ್ತೆಯಲ್ಲಿ ಒದ್ದಾಡಿ ಗೋಳಾಡುತ್ತಿರುವ ಪತಿ.. ಯಾರ ಬದುಕಿನಲ್ಲೂ ಇಂತಹದೊಂದು ಘಟನೆ ಆಗಬಾರದು ಎಂದು ವೈರಿಗಳೂ ಬಯಸುವಂತಹ ಕರುಳು ಹಿಂಡುವ ಘಟನೆ ನಡೆದಿದ್ದು ನೆಲಮಂಗಲದಲ್ಲಿ.
ಇಂದು ಬೆಳಗ್ಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಎಡೇಹಳ್ಳಿ ಗೇಟ್ ಬಳಿ ಸಂಭವಿಸಿದ ಈ ಭೀಕರ ರಸ್ತೆ ಅಪಘಾತದ ಸನ್ನಿವೇಶ ಎಂತಹ ಕಲ್ಲು ಹೃದಯದವರ ಮನಸ್ಸನ್ನೂ ಕರಗಿಸುವಂತಿತ್ತು. ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಯಮದೂತನಂತೆ ಬಂದ ಟಿಪ್ಪರ್ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಈ ದಂಪತಿಯ ಬೈಕ್‌ಗೆ ಅಪ್ಪಳಿಸಿದೆ. ಪರಿಣಾಮ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ತುಂಬು ಗರ್ಭಿಣಿ ಸಿಂಚನ (30) ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.
ಸಿಂಚನಾಗೆ ಇದೇ ಆಗಸ್ಟ್ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್‌ನಲ್ಲಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್‌ನಿಂದ ಕೆಳೆಗೆ ಬಿದ್ದಿದ್ದು, ಟಿಪ್ಪರ್ ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ತಾಯಿಯ ಹೊಟ್ಟೆ ಸೀಳಿ ಹೊರಗೆ ಬಂದಿದೆ. ತಂದೆಯ ಕಣ್ಣೆದುರಲ್ಲೇ ನಡು ರಸ್ತೆಯಲ್ಲಿ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ.
ಅದೃಷ್ಟವಶಾತ್ ಸಿಂಚನಾ ಪತಿ ಮಂಜುನಾಥ್ ಅವರು ಪವಾಡಸದೃಶವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಅವರು ತನ್ನ ಪ್ರೀತಿಯ ಪತ್ನಿ ಮತ್ತು ಇನ್ನೂ ಜಗತ್ತಿನ ಬೆಳಕು ಕಾಣಬೇಕಾದ ಮಗುವು ತನ್ನ ಕಣ್ಣೆದುರಲ್ಲೇ ಮೃತಪಟ್ಟಿರುವುದನ್ನು ನೋಡಿ ಆಕಾಶವೇ ಕಳಚಿ ಬಿದ್ದಂತೆ ರಸ್ತೆಯಲ್ಲೇ ಗೋಳಾಡಿದ್ದಾರೆ.
ಮಾಹಿತಿ ಪ್ರಕಾರ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಲಾರಿ ಚಾಲಕರ ನಡುವೆ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ, ಈ ವೇಳೆ ಸರ್ವಿಸ್ ರಸ್ತೆಗೆ ದ್ವಿಚಕ್ರ ವಾಹನವನ್ನು ಸರ್ವೀಸ್ ರಸ್ತೆಗೆ ಇಳಿಸಿದ್ದಾರೆ. ಆಗ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಮಹಿಳೆ ಮಗು ಸಹಿತ ಸಾವನ್ನಪ್ಪಿದ್ದಾರೆ. ತುಂಬು ಗರ್ಭಿಣಿಯನ್ನು ಕಳೆದುಕೊಂಡು ಗಂಡ ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಶವಪರೀಕ್ಷೆ ನಡೆಸಲು ನೆಲಮಂಗಲದ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೇಕಾ ಬಿಟ್ಟಿ ಗಾಡಿ ಓಡಿಸುವ ಎಲ್ಲಾ ವಾಹನ ಸವಾರರಿಗೆ ಲಗಾಮು ಹಾಕಬೇಕು ಎಂದು ಸಾರ್ವಜನಿಕ ವಲಯದಿಂದ ತೀವ್ರ ಒತ್ತಾಯ ಕೇಳಿ ಬಂದಿದೆ.

Post a Comment