ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ನಿವೇಶನಗಳು ಇನ್ಮುಂದೆ ಸಕ್ರಮ - ಇಂದಿನಿಂದಲೇ ಸಿಗಲಿದೆ ಇ ಸ್ವತ್ತು
ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ-ಸ್ವತ್ತು ಪಡೆಯಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಸುವರ್ಣಾವಕಾಶ ಕಲ್ಪಿಸಿದೆ. ತಂತ್ರಾಂಶದ ಮೂಲಕ ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ಇ-ಸ್ವತ್ತು ಪ್ರಮಾಣ ಪತ್ರ (ನಮೂನೆ- 11ಎ ಮತ್ತು ನಮೂನೆ 11ಬಿ) ವಿತರಣೆಯನ್ನು ಆರಂಭಿಸಲಾಗುತ್ತಿದೆ. ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ-ಸ್ವತ್ತು ಸಹಾಯವಾಣಿ(ಸಂಖ್ಯೆ: 94834 76000) ಸ್ಥಾಪಿಸಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಬಡಾವಣೆಗಳಲ್ಲಿನ ನಿವೇಶನಗಳಿಗೆ 11'ಬಿ' ಖಾತೆ ಪಡೆಯಲು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ದ ನಿವೇಶನದಾರರಿಗೆ ಇದರಿಂದ ಕೊನೆಗೂ ಮುಕ್ತಿ ದೊರೆತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಂದಾಯ ಜಮೀನುಗಳಲ್ಲಿ ನಿರ್ಮಾಣವಾಗಿದ್ದ ಲೇಔಟ್‌ಗಳಲ್ಲಿನ ನಿವೇಶನಗಳ ನೋಂದಣಿ, ಮಾರಾಟ ಮಾಡುವುದನ್ನು ರಾಜ್ಯ ಸರ್ಕಾರ ಒಂದು ವರ್ಷದಿಂದ ರದ್ದುಮಾಡಿತ್ತು. ಇದರಿಂದ ಗ್ರಾಮೀಣ ಭಾಗದಲ್ಲಿ ನಿವೇಶನಗಳ ಮಾರಾಟ, ನೋಂದಣಿಯಾಗದೆ ಮಧ್ಯಮವರ್ಗದವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಅಲ್ಲದೆ ಮಧ್ಯಮವರ್ಗದವರು ಒಂದು ಸ್ವಂತ ನಿವೇಶನ ಹೊಂದುವ ಬಹುದಿನಗಳ ಕನಸು ಕನಸಾಗಿಯೇ ಉಳಿದಿತ್ತು.
ಈಗ ಚಾಲನೆಗೆ ಬರುತ್ತಿರುವ ಇ-ಸ್ವತ್ತು 2.0 ತಂತ್ರಾಂಶದಲ್ಲಿ 11 'ಬಿ' ಖಾತೆ ಪಡೆಯಲು 7-4-2025ರ ದಿನಾಂಕದಿಂದ ಹಿಂದೆ ನಿವೇಶನ ನೋಂದಣಿಯಾಗಿದ್ದರೆ ಅಥವಾ ಮನೆ ನಿರ್ಮಿಸಿದ್ದರೆ (ವಿದ್ಯುತ್ ಸಂಪರ್ಕ ಪಡೆದಿರಬೇಕು) ಮಾತ್ರ ಇ-ಸ್ವತ್ತು ತಂತ್ರಾಂಶದ ಮೂಲಕ 11 'ಬಿ' ಖಾತೆ ಪಡೆಯಲು ಅರ್ಜಿ ಸಲ್ಲಿಕೆ ಮೂರು ತಿಂಗಳ ಕಾಲವಕಾಶ ಕಲ್ಪಿಸಲಾಗಿದೆ.
ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲುಮ ಎದುರಾಗುವ ಎಲ್ಲಾ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ-ಸ್ವತ್ತು ಸಹಾಯವಾಣಿ 94834 76000 ಸ್ಥಾಪಿಸಲಾಗಿದೆ.
ಯಶವಂತಪುರದಲ್ಲಿ ಸ್ಥಾಪಿತಗೊಂಡಿರುವ ಕಾಲ್‌ಸೆಂಟರ್‌ನ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಇವರ ಸಹಾಯಕ್ಕಾಗಿ 34 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನಿಯೋಜಿಸಲಾಗಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಲು ಮತ್ತು ಇ-ಸ್ವತು ದಾಖಲೆ ನೀಡಲು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾರ್ಗದರ್ಶನ ನೀಡಲಿದ್ದಾರೆ.
15 ದಿನದಲ್ಲಿ ಸಿಗುತ್ತೆ ಖಾತಾ
ಅರ್ಜಿ ಸ್ವೀಕರಿಸಿದ ಬಳಿಕ ಗ್ರಾಮ ಪಂಚಾಯಿತಿ ಗ್ರೇಡ್-1/ಗ್ರೇಡ್-2 ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ನಡೆಸಿ 4 ಕರ್ತವ್ಯದ ದಿನಗಳಲ್ಲಿ ಪೂರ್ಣ ದಾಖಲೆ ಪರಿಶೀಲಿಸಬೇಕು.
ತಂತ್ರಾಂಶದಲ್ಲಿ ಮಾಹಿತಿ ಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಬೇಕು. ಎರಡು ದಿನಗಳಲ್ಲಿ ಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಸಲ್ಲಿಸಿ ಅವರಿಂದ ಪ್ರಸ್ತಾವನೆ ಸ್ವೀಕರಿಸಿದ 4 ದಿನದ ಒಳಗಾಗಿ ತೀರ್ಮಾನಿಸಬೇಕು, ನಿಗದಿತ ದಾಖಲೆ ಸಲ್ಲಿಸಿದ್ದರೆ 15 ದಿನದ ಒಳಗೆ ಡಿಜಿಟಲ್ ಸಹಿ ಮಾಡಿ ಇ-ಖಾತಾ ವಿತರಿಸಬೇಕೆಂದು ಕಾನೂನು ರೂಪಿಸಲಾಗಿದೆ.
Post a Comment