ಉಡುಪಿ: ಅಕ್ರಮ ವಲಸೆ ಪ್ರಕರಣ -10 ಮಂದಿ ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ
ಅಕ್ರಮವಾಗಿ ಭಾರತಕ್ಕೆ ಬಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಬಾಂಗ್ಲಾ ದೇಶದ 10 ಮಂದಿ ವಲಸಿಗರಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ ಶಿಕ್ಷೆ ವಿಧಿಸಿ ಡಿಸೆಂಬರ್ 8 ರಂದು ಆದೇಶ ನೀಡಿದೆ.
ಬಾಂಗ್ಲಾ ದೇಶದ ಪ್ರಜೆಗಳಾದ ಹಕೀಮ್ ಆಲಿ, ಸುಜೋನ್ ಎಸ್.ಕೆ ಯಾನೆ ಫಾರೂಕ್, ಇಸ್ಮಾಯಿಲ್ ಎಸ್.ಕೆ., ಮುಹಮ್ಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ ಯಾನೆ ಅಬ್ದುಲ್ ಕರೀಮ್, ಸಲಾಂ ಎಸ್.ಕೆ ಯಾನೆ ಎಂ.ಡಿ. ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ., ಮುಹಮ್ಮದ್ ಸೋಜಿಬ್ ಯಾನೆ ಎಂ.ಡಿ.ಅಲ್ಲಾಂ ಅಲಿ, ರಿಮೂಲ್ ಯಾನೆ ಅಬ್ದುಲ್ ರೆಹಮಾನ್, ಮುಹಮ್ಮದ್ ಇಮಾಮ್ ಶೇಖ್, ಮುಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೆ ಗುರಿಯಾದ ಆರೋಪಿಗಳು.2024ರ ಅಕ್ಟೋಬರ್ 11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ಮಲ್ಪೆ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಅವರೆಲ್ಲ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೆ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ಎಂಬಲ್ಲಿಗೆ ಬಂದಿರುವುದು ತಿಳಿದುಬಂತು.
ಅದರಂತೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಅವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ನಡೆಸಿದ್ದು, ಬಾಕಿ ಉಳಿದ 3 ಮಂದಿ ಅಕ್ರಮ ವಲಸಿಗರನ್ನು ಬಂಧಿಸಿದ್ದರು.
ಒಟ್ಟು 10 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳ ವಿರುದ್ದ ಉಡುಪಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು ತಲಾ 10,000ರೂ. ದಂಡವನ್ನು ವಿಧಿಸಿ ಆದೇಶಿಸಿದೆ.

Post a Comment