5 ಕೆಜಿ ಅಕ್ಕಿ ಬದಲಿಗೆ 'ಇಂದಿರಾ ಆಹಾರ ಕಿಟ್': ತಿಂಗಳಿಗೆ 1.25 ಕೋಟಿ ಕುಟುಂಬಕ್ಕೆ ಕಿಟ್ ವಿತರಣೆ..!
ಇದರಂತೆ, ಕೇಂದ್ರ ಸರ್ಕಾರದಿಂದ ಈಗಿನಂತೆ 5 ಕೆಜಿ ಅಕ್ಕಿ ದೊರಕುವುದು ಮುಂದುವರಿಯುತ್ತದೆ. ಆದರೆ ರಾಜ್ಯ ಸರ್ಕಾರದ ಹೆಚ್ಚುವರಿ 5 ಕೆಜಿ ಅಕ್ಕಿಯ ಭಾಗವನ್ನು ಈ ಬಹು-ಉಪಯುಕ್ತ ಆಹಾರ ಕಿಟ್ ತುಂಬಲಿದೆ. ಇದರಡಿಯಲ್ಲಿ ರಾಜ್ಯದ ಸುಮಾರು 1.25 ಕೋಟಿ (1,25,08,262) ಪಾಲುದಾರ ಕುಟುಂಬಗಳಿಗೆ ಪ್ರತಿ ತಿಂಗಳು ಆಹಾರ ಕಿಟ್ ವಿತರಿಸಲಾಗುವುದು.
ಹೊಸ ಆಹಾರ ಕಿಟ್‌ನಲ್ಲಿ ಏನಿದೆ ?
ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕಿಟ್ ವಿತರಣೆ ಆಗಲಿದೆ. ಪ್ರತಿ ಕಿಟ್ನಲ್ಲಿ ಗರಿಷ್ಠ ಪ್ರಮಾಣದಲ್ಲಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಈ ಯೋಜನೆಯಡಿ ವಿತರಿಸಲಾಗುತ್ತದೆ.
ಬದಲಾವಣೆಗೆ ಕಾರಣಗಳು
ಈ ನಿರ್ಧಾರದ ಹಿಂದೆ ಎರಡು ಪ್ರಮುಖ ಕಾರಣಗಳಿವೆ:
ಆಹಾರದ ದುರ್ಬಳಕೆ ತಡೆ: ಹೆಚ್ಚುವರಿ ಅಕ್ಕಿಯು ಕಾಳ್ಳಸಂತೆ (ಬ್ಲ್ಯಾಕ್ ಮಾರ್ಕೆಟ್) ಗೆ ದಾರಿ ಮಾಡಿಕೊಡುತ್ತಿದೆ ಮತ್ತು ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಹಾರ ವ್ಯರ್ಥ ಮಾಡುವುದು ದುರದೃಷ್ಟಕರ ಮತ್ತು ಮಹಾತ್ಮ ಗಾಂಧಿ ಅವರು ಇದನ್ನು ಪಾಪ ಎಂದು ಕರೆದಿದ್ದಾರೆ ಎಂದು ಹೇಳಿದ್ದಾರೆ.
ಪೌಷ್ಟಿಕಾಂಶದ ವೈವಿಧ್ಯತೆ: ಕೇವಲ ಅಕ್ಕಿ ಮಾತ್ರವಲ್ಲದೆ, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಸಮಗ್ರ ಆಹಾರ ಕಿಟ್ ಮೂಲಕ ಫಲಾನುಭವಿ ಕುಟುಂಬಗಳ ಆಹಾರ ಪೌಷ್ಟಿಕತೆಯನ್ನು ಉತ್ತಮಪಡಿಸುವುದು ಇನ್ನೊಂದು ಗುರಿಯಾಗಿದೆ.
ಆರ್ಥಿಕ ಹೊರೆ ಮತ್ತು ಅನುಷ್ಠಾನ ಯೋಜನೆ
ಈ ಹೊಸ ಯೋಜನೆ ರಾಜ್ಯದ ಬೊಕ್ಕಸದ ಮೇಲೆ ಗಣನೀಯ ಹೊರೆ ತಂದಿದೆ. ಪ್ರತಿ ತಿಂಗಳು ಸುಮಾರು 466 ಕೋಟಿ ರೂಪಾಯಿ ವೆಚ್ಚವಾಗುವುದೆಂದು ಸರ್ಕಾರ ಅಂದಾಜಿಸಿದೆ. ಸುಸ್ಥಿರ ತೊಗರಿ ಬೇಳೆಯ ಪೂರೈಕೆಗಾಗಿ NAFED/NCCF ನಂತರದ ಕೇಂದ್ರೀಯ ಸಂಸ್ಥೆಗಳ ಮೂಲಕ ಅಥವಾ ಪಾರದರ್ಶಕ ಖರೀದಿ ಪ್ರಕ್ರಿಯೆಯನ್ನು ಅನುಸರಿಸಲು ನಿರ್ದೇಶನ ನೀಡಲಾಗಿದೆ.
ವಿತರಣೆ ಸಮಯ ಮತ್ತು ಗುಣಮಟ್ಟ ಕುರಿತು ಕಟ್ಟುನಿಟ್ಟಾದ ಸೂಚನೆಗಳಿವೆ:
ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಕಿಟ್ ತಲುಪಿಸಬೇಕು.
ಗುಣಮಟ್ಟ ಮತ್ತು ಅಳತೆಯಲ್ಲಿ ಯಾವುದೇ ರಾಜಿ ಇರಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ಪಾರದರ್ಶಕತೆಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ತಂತ್ರಾಂಶ ಅಳವಡಿಸಲಾಗುವುದು.
ಇಂದಿರಾ ಆಹಾರ ಕಿಟ್ ಯೋಜನೆಯು ಹಸಿವಿನ ನೋವನ್ನು ತೊಡೆದುಹಾಕುವ ಮೂಲ ಉದ್ದೇಶದ ಜೊತೆಗೆ, ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶದ ದಿಶೆಯಲ್ಲಿ ಒಂದು ಮಹತ್ವದ ಕ್ರಮವೆಂದು ಪರಿಗಣಿಸಲಾಗಿದೆ.

Post a Comment