ಅಪಘಾತವಾಗಿ ಬಿದ್ದಿದ್ದ ಬೈಕ್ ಸವಾರನ 'ಫೋನ್ ಪೇ'ಯಿಂದ 80,000 ದೋಚಿದ ಪಾಪಿಗಳು.!
ಏನಿದು ಘಟನೆ..?
ದಿನಾಂಕ 19.12.2025 ರಂದು ಪಿರ್ಯಾದುದಾರರಾದ ಶ್ರೀ.ಅಂಕನಾಯಕ ಬಿನ್ ಸಣ್ಣಸಿದ್ದನಾಯಕ, ಬೆಂಕಿಪುರ ಗ್ರಾಮ, ಹುಣಸೂರು ತಾಲೂಕು ರವರು ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 16.2.2025 ರಂದು ಪಿರ್ಯಾದುದಾರರ ತಮ್ಮನಾದ ಗಣೇಶ್ ರವರು ಕಡಕೊಳ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ವಾಪಸ್ ಬರುವಾಗ ನಾಯಿ ಅಡ್ಡಲಾಗಿ ಬಂದು ಬಿದ್ದು ಪ್ರಜ್ಞೆ ತಪ್ಪಿದ್ದು, ಯಾರೋ ಅಪರಿಚಿತ ವ್ಯಕ್ತಿಯು ಬಂದು ಇವರನ್ನು ಎತ್ತಿ ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ಹೇಳಿ ಮೊಬೈಲ್ ನ್ನು ಪಡೆದುಕೊಂಡು ಸ್ಟೀನ್ ಓಪನ್ ಮಾಡಿ ಗಣೇಶ ರವರ ಕಡೆಯಿಂದ ಬಲವಂತವಾಗಿ ಯುಪಿಐ ಪಿನ್ ನಂಬರ್ ಪಡೆದು ಗಣೇಶ್ ರವರ ಫೋನ್ ಪೇ ಯಿಂದ 80,000 ರೂಗಳನ್ನು ಹಾಕಿಕೊಂಡು ಆಸ್ಪತ್ರೆಗೂ ಸಹ ಸೇರಿಸದೇ ಮೊಬೈಲ್ ಬಿಟ್ಟು ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೇಲ್ಕಂಡ ಪ್ರಕರಣದ ಆರೋಪಿಯ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಶ್ರೀ.ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ.ಸಿ.ಮಲ್ಲಿಕ್ ಹಾಗೂ ಶ್ರೀ.ಎಲ್.ನಾಗೇಶ್ ರವರುಗಳ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ಆರ್.ಶ್ರೀಕಾಂತ್ ರವರ ನೇತೃತ್ವದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ.ಸುನೀಲ್.ಎಸ್.ಪಿ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀ.ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಶ್ರೀ.ಮಂಜುನಾಥ.ಎಸ್, ಸಿಹೆಚ್ಸಿ 220, ಶ್ರೀ.ರಂಗಸ್ವಾಮಿ.ಹೆಚ್.ವಿ, ಸಿಹೆಚ್ಸಿ 101, ಶ್ರೀ.ಬಸವರಾಜು, ಸಿಪಿಸಿ-159 ರವರು ಆರೋಪಿಗಳಾದ 1) ರಮೇಶ.ಜಿ ಬಿನ್ ಗೋವಿಂದ, 25 ವರ್ಷ, ಕೊರಮ ಜನಾಂಗ, ಹಂದಿ ಸಾಕಾಣಿಕೆ ಕೆಲಸ, ಮನೆ ನಂಬರ್ 1397, 2 ನೇ ಕ್ರಾಸ್, “ಸಿ” ಬ್ಲಾಕ್, ಮಹದೇವಪುರ, ಮೈಸೂರು ನಗರ, 2) ಮನು ಬಿನ್ ಮುತ್ತಣ್ಣ, 25 ವರ್ಷ, ಕೊರಮ ಜನಾಂಗ, ಹಂದಿ ಸಾಕಾಣಿಕೆ ಕೆಲಸ, ಮನೆ ನಂಬರ್ 331, 10 ನೇ ಕ್ರಾಸ್, ರೈಲ್ವೆ ಲೇಔಟ್, ರಾಮಬಾಯಿ ನಗರ, ಮೈಸೂರು ತಾಲೂಕು ರವರುಗಳನ್ನು ಮೈಸೂರು ತಾಲೂಕು ರಾಮಬಾಯಿನಗರದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗಳ ಕಡೆಯಿಂದ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಗಳು ಹಾಗೂ ನೊಂದ ವ್ಯಕ್ತಿ ಗಣೇಶ್ ರವರಿಂದ ಮೋಸದಿಂದ ಪಡೆದಿದ್ದ 80,000 ರೂಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮೇಲ್ಕಂಡ ಪ್ರಕರಣದ ಪತ್ತೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ಆರ್.ಶ್ರೀಕಾಂತ್, ಪೊಲೀಸ್ ನಿರೀಕ್ಷಕರಾದ ಶ್ರೀ.ಸುನೀಲ್.ಎಸ್.ಪಿ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀ.ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಶ್ರೀ.ಮಂಜುನಾಥ.ಎಸ್, ಸಿಹೆಚ್ಸಿ 220, ಶ್ರೀ.ರಂಗಸ್ವಾಮಿ.ಹೆಚ್.ವಿ. ಸಿಹೆಚ್ ಸಿ 101, ಶ್ರೀ.ಬಸವರಾಜು, ಸಿಪಿಸಿ-159 ರವರುಗಳ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ವಿಷ್ಣುವರ್ಧನ.ಎನ್. ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

Post a Comment