ಮದುವೆಯಾಗಿ ತಿಂಗಳು ತುಂಬುವ ಮೊದಲೇ ನೇಣಿಗೆ ಶರಣಾದ ನವವಧು
ಹಸೆಮಣೆ ಏರಿ ಇನ್ನೂ ತಿಂಗಳು ತುಂಬುವ ಮೊದಲೇ ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಐಶ್ವರ್ಯ ಸಿಕೆ (24) ಮೃತ ದುರ್ದೈವಿ.
ಐಶ್ವರ್ಯ ನವೆಂಬರ್ .27ರಂದು ಬೆಂಗಳೂರು ಮಲ್ಲಸಂದ್ರದ ಲಿಖಿತ್ ಸಿಂಹ ಜೊತೆಗೆ ಹಸಮಣೆ ಏರಿದ್ದಳು. ಮದುವೆಯಾಗಿದ್ದಾಗಿನಿಂದ ಗಂಡ ಹೆಂಡತಿ ಅತ್ತೆಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಗಂಡ ಲಿಖಿತ್ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ನಿಮ್ಮ ಮಗಳನ್ನು ನಿಮ್ಮ ಮನೆಗೇ ಕರೆದುಕೊಂಡು ಹೋಗಿ’ ಎಂದು ಲಿಖಿತ್ ಐಶ್ವರ್ಯ ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ ಎನ್ನಲಾಗಿದೆ.
ಬುಧವಾರ ಬೆಳಗ್ಗೆಯಷ್ಟೇ ಮೃತಳ ಪೋಷಕರು ಗಂಡನ ಮನೆಗೆ ಬಂದು ರಾಜಿ ಸಂಧಾನ ಮಾಡಿಸಿ ಊರಿನ ಕಡೆಗೆ ಹೊರಟಿದ್ದರು. ಇತ್ತ ಪೋಷಕರು ಊರು ಸೇರುತ್ತಿದ್ದಂತೆ ಐಶ್ವರ್ಯ ನೇಣು ಹಾಕಿಕೊಂಡು ಸತ್ತಿದ್ದಾಳೆ ಎಂದು ಗಂಡನ ಮನೆಯವರು ಮಾಹಿತಿ ನೀಡಿದ್ದಾರೆ

Post a Comment