".

Header Ads

ಶಿಕ್ಷಕರ ಸಂಬಳದಿಂದಲೇ ಮಕ್ಕಳಿಗೆ ಮೊಟ್ಟೆ ಖರೀದಿ! ಪ್ರತೀ ದಿನ ಶಿಕ್ಷಕರಿಗೆ ಹೊರೆ

 


 ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಗಮನ ನೀಡಬೇಕಾದ ಶಿಕ್ಷಕರು ಸರಕಾರದ ಮೊಟ್ಟೆ ಯೋಜನೆಗೆ ತಮ್ಮ ವೇತನದಿಂದಲೇ ಖರ್ಚು ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಪ್ರತೀ ಶಾಲೆಯಲ್ಲಿ ತಿಂಗಳಿಗೆ ಕನಿಷ್ಠ 5 ಸಾವಿರ ರೂ.ಗಳನ್ನು ಮುಖ್ಯ ಶಿಕ್ಷಕರೇ ತಮ್ಮ ವೇತನದಿಂದ ವ್ಯಯಿಸಬೇಕಾಗಿದೆ.

ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಲು ತಲಾ ಒಂದು ವಿದ್ಯಾರ್ಥಿಗೆ ಒಂದು ದಿನಕ್ಕೆ 6 ರೂ. ಸರಕಾರದಿಂದ ಸಿಗುತ್ತಿದೆ. ಇದರಲ್ಲಿ 5 ರೂ. ಮಾತ್ರ ಮೊಟ್ಟೆ ಖರೀದಿ ವೆಚ್ಚ. ಉಳಿದ 1 ರೂ.ನಲ್ಲಿ ಮೊಟ್ಟೆ ಬೇಯಿಸಲು ಗ್ಯಾಸ್‌ ಬಳಕೆಗೆ 50 ಪೈಸೆ, 1 ಮೊಟ್ಟೆಯ ಸಿಪ್ಪೆ ತೆಗೆದವರಿಗೆ 30 ಪೈಸೆ ಹಾಗೂ 20 ಪೈಸೆ ಸಾಗಾಣಿಕೆ ವೆಚ್ಚ ಎಂದು ನಿಗದಿ ಮಾಡಲಾಗಿದೆ.

ಕೆಲವು ಶಾಲೆಯವರು ರಖಂ ಆಗಿ ಮೊಟ್ಟೆ ಖರೀದಿ ಮಾಡಿದರೆ, ಗ್ರಾಮಾಂತರ ಭಾಗ ಸಹಿತ ಹಲವು ಕಡೆ ಚಿಲ್ಲರೆಯಾಗಿ ಅಂಗಡಿಯಿಂದ ಮೊಟ್ಟೆಖರೀದಿ ಮಾಡುತ್ತಾರೆ. ಆದರೆ ಮೊಟ್ಟೆ ದರ ಈಗ ಗಗನಕ್ಕೇರುತ್ತಿದೆ. ರಖಂನಲ್ಲಿ ಕೆಲವೆಡೆ ಮೊಟ್ಟೆ ಖರೀದಿ ದರ ಸುಮಾರು 7.50 ರೂ. ಆಸುಪಾಸಿನಲ್ಲಿದೆ. ಆದರೆ ಸರಕಾರದಿಂದ 1 ಮೊಟ್ಟೆ ಖರೀದಿಗೆ ಕೇವಲ 5 ರೂ. ಅಷ್ಟೇ ಸಿಗುವುದು. ಪರಿಣಾಮವಾಗಿ ಪ್ರತೀ ಶಾಲೆಯಲ್ಲಿ ಮೊಟ್ಟೆಯ ಹೆಸರಿನಲ್ಲಿ ಒಬ್ಬೊಬ್ಬ ವಿದ್ಯಾರ್ಥಿಯ ತಲಾ ಎರಡೂವರೆ ರೂ. ಹೆಚ್ಚುವರಿ ಮೊತ್ತ ಈಗ ಶಿಕ್ಷಕರಿಗೆ ಹೊರೆಯಾಗುತ್ತಿದೆ.

 ಪ್ರತೀ ದಿನ ಒಂದು ಮೊಟ್ಟೆಗೆ ಸಾಮಾನ್ಯವಾಗಿ 7.50 ರೂ. ನೀಡುತ್ತಿದ್ದೇವೆ. ಸರಕಾರದಿಂದ 5 ರೂ. ಸಿಗುತ್ತದೆ. ಉಳಿಕೆ 2.50 ರೂ.ಗಳನ್ನು ನಾವೇ ಕೈಯಿಂದ ಹಾಕಬೇಕು. ಶಾಲೆಯಲ್ಲಿ 300 ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಪ್ರತೀ ದಿನ ಮುಖ್ಯ ಶಿಕ್ಷಕರು 750 ರೂ. ನಾವು ಕೈಯಿಂದ ಹಾಕಬೇಕು. ಒಂದು ದಿನಕ್ಕೆ 750 ರೂ.ಗಳಂತೆ ತಿಂಗಳಿಗೆ ಸಾವಿರಾರು ರೂ.ಗಳನ್ನು ನಾವು ಸಂಬಳದಿಂದಲೇ ಮೊಟ್ಟೆಗಾಗಿ ವಿನಿಯೋಗಿಸಬೇಕಾಗುತ್ತದೆ. ಶಿಕ್ಷಣ ಇಲಾಖೆಯ ಗಮನಕ್ಕೆ ಇದನ್ನು ತಂದರೂ ಅವರು ಈ ಬಗ್ಗೆ ಗಮನಹರಿಸುವುದೇ ಇಲ್ಲ' ಎನ್ನುತ್ತಾರೆ.

 
ಗ್ರಾಮಾಂತರ ಭಾಗದ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿ, "ಮೊಟ್ಟೆಖರೀದಿ, ಗ್ಯಾಸ್‌ ವೆಚ್ಚ, ಸಿಪ್ಪೆ ತೆಗೆಯುವುದು ಹಾಗೂ ಸಾಗಾಣಿಕೆ ವೆಚ್ಚ ಸೇರಿ ನಮ್ಮ ಶಾಲೆಗೆ ಕಳೆದ ತಿಂಗಳು ಸುಮಾರು 29 ಸಾವಿರ ರೂ. ಸರಕಾರದಿಂದ ಅನುದಾನ ಬಂದಿದೆ. ಆದರೆ ಮೊಟ್ಟೆ ಖರೀದಿಗೆ ನಾವು 37 ಸಾವಿರ ರೂ. ಖರ್ಚು ಮಾಡಿದ್ದೇವೆ. ಅಂದರೆ 8 ಸಾವಿರ ರೂ. ಕೊರತೆ ಆಗಿದೆ. ಇದನ್ನು ಮುಖ್ಯ ಶಿಕ್ಷಕರೇ ನಿಭಾಯಿಸಬೇಕಾದ ಅನಿವಾರ್ಯ ಇದೆ' ಎನ್ನುತ್ತಾರೆ.

 

Powered by Blogger.