".

Header Ads

ಮೆದುಳಿನ ರಕ್ತಸ್ರಾವದಿಂದ ಮಗಳ ಸಾವು – ಅಂಗಾಂಗ ದಾನ ಮಾಡಿ ಮಾದರಿಯಾದ ತಾಯಿ

 


ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಯುವತಿಯ ಅಂಗಾಂಗವನ್ನು ದಾನ ಮಾಡುವ ಮೂಲಕ ಯುವತಿಯ ತಾಯಿ ಸಾರ್ಥಕತೆ ಮರೆದಿದ್ದಾರೆ.

ಮೃತ ಸಿಂಧು ಶೆಟ್ಟಿ ಸುಳ್ಯದ ರಥಬೀದಿ ನಿವಾಸಿ ಮಮತಾ ಶೆಟ್ಟಿ ಅವರ ಪುತ್ರಿಯಾಗಿದ್ದು, ಸುಳ್ಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಪುತ್ತೂರು ಆದರ್ಶ ವಿವಿದೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದರು. ಡಿಸೆಂಬರ್ 16ರಂದು ಬ್ಯಾಂಕ್ ಕೆಲಸ ಮುಗಿಸಿ ಬಸ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸಿಂಧು ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾತ್ತು.

ಈ ವೇಳೆ ಅವರಿಗೆ ನರದ ಸಮಸ್ಯೆ ಉಂಟಾಗಿರುವುದು ಪತ್ತೆಯಾಯಿತು. ಮರುದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮೆದುಳಿನ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಯಿತು. ಒಮ್ಮೆ ಪ್ರಜ್ಞೆ ಬಂದಿತ್ತಾದರೂ ಬಳಿಕ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದರು.

ಯುವತಿಯ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ, ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್, ಕಣ್ಣುಗಳು ಮುಂತಾದ ಪ್ರಮುಖ ಅಂಗಾಂಗಳನ್ನು ಉಳಿಸಲಾಗಿದೆ. ಈ ಅಂಗಗಳನ್ನು ದಾನ ಮಾಡುವುದರಿಂದ ಇತರರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು ಮೃತ ಯುವತಿಯ ತಾಯಿ ಮಮತಾ ಅವರು ಮನೆಯ ಉಳಿದವರೊಂದಿಗೆ ಚರ್ಚಿಸಿ ಅಂಗಾಂಗಗಳನ್ನು ದಾನಮಾಡುವ ನಿರ್ಧಾರ ಕೈಗೊಂಡರು. ಅದರಂತೆ ಮೈಸೂರಿನ ಅಪೋಲೋ ಆಸ್ಪತ್ರೆ, ನಿಟ್ಟೆ, ಎ.ಜೆ. ಮತ್ತು ಕೆ.ಎಂ.ಸಿ. ಆಸ್ಪತ್ರೆಗಳಿಗೆ ಅಂಗಾಂಗ ದಾನ ಮಾಡಲಾಯಿತು.

ಅಂಗಾಂಗ ದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಂಧು ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸಿದ್ದಕಟ್ಟೆಯಲ್ಲಿರುವ ಮಾವ ರಾಜೇಶ್ ಅವರ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಮೃತ ಸಿಂಧು ಅವರು ತಾಯಿ, ಸಹೋದರಿಯನ್ನು ಅಗಲಿದ್ದಾರೆ. ತಾಯಿ ಮಮತಾ ಅವರು ಶ್ರಮ ಜೀವಿ ಮಹಿಳೆಯಾಗಿದ್ದು, ಸುಳ್ಯದ ಶಾಂತಿನಗರ ಜಟ್ಟಿಪ್ಪಳ್ಳದಲ್ಲಿ ವಾಸವಿದ್ದಾರೆ. ಕೆಲವು ವರ್ಷದ ಹಿಂದೆ ಪತಿ ಸೀತಾರಾಮ ಅವರು ಬಿದ್ದು ಅಸೌಖ್ಯಕ್ಕೀಡಾಗಿ ಸಾವು ಬದುಕಿನೊಂದಿಗೆ ಹೋರಾಟ ನಡೆಸಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆದರೂ ಮಮತಾ ಅವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಓರ್ವಳಿಗೆ ಮದುವೆ ಮಾಡಿಸಿದ್ದು, ಸಿಂಧು ಅವರಿಗೆ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ತಾಯಿಯನ್ನು ಸಲಹಬೇಕಾದ ಮಗಳೇ ಇದೀಗ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಈ ದುಃಖದ ಸನ್ನಿವೇಶದಲ್ಲೂ ಮಗಳ ಅಂಗಾಂಗ ದಾನ ಮಾಡಿ ಮತ್ತೊಬ್ಬರಿಗೆ ಬದುಕು ನೀಡುವ ಮೂಲಕ ಮಮತಾ ಅವರು ಮಾದರಿಯಾಗಿದ್ದಾರೆ ಎಂಬ ಮೆಚ್ಚುಗೆ ಜನರಿಂದ ವ್ಯಕ್ತವಾಗಿದೆ.

Powered by Blogger.