".

Header Ads

ಪಂಚಾಯತ್‌ ಚುನಾವಣೆಯಲ್ಲಿ ಹೀನಾಯ ಸೋಲು - ಮನೆಮನೆಗೆ ತೆರಳಿ ಹಣವನ್ನು ವಾಪಸ್‌ ಕೇಳಿದ ಅಭ್ಯರ್ಥಿ!

 


ತೆಲಂಗಾಣದ   ನಲ್ಗೊಂಡ  ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ಪಂಚಾಯತ್ ಚುನಾವಣೆಯಲ್ಲಿ   ಹೀನಾಯವಾಗಿ ಸೋಲನ್ನನುಭವಿಸಿದ ಅಭ್ಯರ್ಥಿಯೊಬ್ಬರು ಚುನಾವಣೆಗೆ ಮೊದಲು ತಾವು ಜನರಿಗೆ ಹಂಚಿದ್ದ ಹಣವನ್ನು ಮನೆ ಮನೆಗೆ ತೆರಳಿ ವಾಪಸ್‌ ಕೇಳಿ ದಾಂಧಲೆ ನಡೆಸಿದ್ದಾರೆ.

ಹೌದು, ನಲ್ಗೊಂಡ ಜಿಲ್ಲೆಯ ನರಕಟ್ಪಲ್ಲಿ ಮಂಡಲದ ಔರ್ವಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾರತ ರಾಷ್ಟ್ರ ಸಮಿತಿ ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಲ್ಲೂರಿ ಬಾಲರಾಜು, ಚುನಾವಣಾ ಪ್ರಚಾರದ ಸಮಯದಲ್ಲಿ ಮತದಾರರಿಗೆ ಹಣ ವಿತರಿಸಿದ್ದರು ಎಂದು ವರದಿಯಾಗಿದೆ. ಆದರೂ ಅವರು ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಕ್ಕಲ ಪರಮೇಶ್ 450 ಮತಗಳ ಅಂತರದಿಂದ ಗೆದ್ದಿದ್ದಾರೆ.

ಈ ಫಲಿತಾಂಶದಿಂದ ನೊಂದ ಬಾಲರಾಜು ಗ್ರಾಮದಲ್ಲಿ ದೇವರ ಫೋಟೋವನ್ನು ಹಿಡಿದು ಮತದಾರರ ಬಳಿ ಹೋಗಿ ತಾವು ನೀಡಿದ್ದ ಹಣವನ್ನು ವಾಪಸ್‌ ಕೇಳಿದ್ದಾರೆ. ಜನರ ಬಳಿ ದೇವರ ಫೋಟೋ ತೋರಿಸಿ, ನೀವು ನನಗೆ ಮತ ಹಾಕಿದ್ದರೆ, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ. ಇಲ್ಲದಿದ್ದರೆ ನಾನು ನಿಮಗೆ ನೀಡಿದ ಹಣವನ್ನು ಹಿಂತಿರುಗಿಸಿ ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಬಾಲರಾಜು ಇದೇ ರೀತಿ ಹಲವಾರು ಮತದಾರರಿಂದ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತಮ್ಮ ಸೋಲಿನ ಅಂತರ 50-60 ಮತಗಳಾಗಿದ್ದರೆ ಅವರು ಹಣವನ್ನು ಹಿಂತಿರುಗಿಸುವಂತೆ ಕೇಳುತ್ತಿರಲಿಲ್ಲ ಆದರೆ ಅವರು ಬರೋಬ್ಬರಿ 450 ಮತಗಳ ಅಂತರದಿಂದ ಸೋತ ಕಾರಣ ಹಣವನ್ನು ಹಿಂತಿರುಗಿಸಲು ಒತ್ತಾಯಿಸಲು ನಿರ್ಧರಿಸಿದರು ಮತ್ತು ಅದಕ್ಕೆ ಅನುಗುಣವಾಗಿ ಮತದಾರರಿಗೆ ಮಾಹಿತಿ ನೀಡಿದರು ಎಂದು ಬಾಲರಾಜು ಅವರ ಪತ್ನಿ ಹೇಳಿದಾರೆ.

Powered by Blogger.