ಡಿಜಿಟಲ್ ಅರೆಸ್ಟ್ ಮಾಡಲು ಬಂದವನನ್ನೇ ChatGPT ಬಳಸಿ ಬಕ್ರಾ ಮಾಡಿದ ದಿಲ್ಲಿ ಯುವಕ!
ಡಿಜಿಟಲ್ ಅರೆಸ್ಟ್ ಮೂಲಕ ಜನಸಾಮಾನ್ಯರನ್ನು ಹೆದರಿಸಿ ಬೆದರಿಸಿ ಅನೇಕ ರೀತಿಯಲ್ಲಿ ಸುಳ್ಳುಗಳ ಜಾಲದಲ್ಲಿ ಸಿಲುಕಿಸಿ ಅವರಿಂದ ಹಣ ಕೀಳುವ ಒಬ್ಬಾತನಿಗೆ ಜಾಣ ಯುವಕನೊಬ್ಬ ಪಂಗನಾಮ ಹಾಕಿದ್ದಾನೆ. ಆರ್ಟಫಿಶಿಯಲ್ ಇಂಟೆಲಿಜೆನ್ಸ್ ಟೂಲ್ ಆದ ಚಾಟ್ ಜಿಪಿಟಿಯನ್ನು ಬಳಸಿ, ಆತನನ್ನೇ ಟ್ರ್ಯಾಪ್ ಮಾಡಿದ್ದಾನೆ!
ತಾನು ಟ್ರ್ಯಾಪ್ ಆಗಿರುವುದು ಗೊತ್ತಾದ ಕೂಡಲೇ ಪೋನ್ ಕಾಲ್ ಮಾಡಿದ್ದ ಆ ವ್ಯಕ್ತಿಯು, ಅದೇ ಫೋನ್ ಕಾಲ್ ನಲ್ಲಿ ಸರ್, ನನ್ನನ್ನು ಬಿಟ್ಟುಬಿಡಿ. ತಪ್ಪಾಯ್ತು. ಮತ್ತೆ ನಿಮ್ಮ ತಂಟೆಗೆ ಬರಲ್ಲ ಎಂದು ಅಲವತ್ತುಕೊಂಡಿದ್ದಾನೆ.
ಈ ಘಟನೆ ನಡೆದಿರುವುದು ಡಿ. 3ರಂದು. ಅಲ್ಲಿನ ಯುವಕನಿಗೆ ಇತ್ತೀಚೆಗೆ ಫೇಸ್ ಬುಕ್ ಕರೆಯೊಂದು ಬಂದಿದೆ. ಕರೆ ಮಾಡಿದಾತ ತನ್ನನ್ನು ತಾನು ಭೂಸೇನಾಧಿಕಾರಿ ಎಂದು ಹೇಳಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಕಳ್ಳ ವ್ಯವಹಾರವಾಗಿದೆ. ನಕಲಿ ವಸ್ತುಗಳ ವ್ಯವಹಾರ ನಡೆಸುತ್ತಿದ್ದೀರಿ ಎಂಬದುು ಗೊತ್ತಾಗಿದೆ. ನಿಮ್ಮ ಹೆಸರಿನಲ್ಲಿ ಬಂದಿರುವ ನಕಲಿ ವಸ್ತುಗಳ ಬಾಕ್ಸ್ ಗಳನ್ನು ನಾವು ಸೀಜ್ ಮಾಡಿದ್ದೇವೆ. ಆ ಪ್ರಕರಣದಿಂದ ನಿಮ್ಮನ್ನು ಮುಕ್ತಗೊಳಿಸಲು ನಮಗೆ ಹಣ ಕಳಿಸಿ ಎಂದು ಒಂದು ಕ್ಯುಆರ್ ಕೋಡ್ ಕಳಿಸಿದ್ದಾನೆ.
ಇದೊಂದು ಮೋಸದ ಕರೆ ಎಂಬುದು ಕರೆ ಸ್ವೀಕರಿಸಿದಾತನಿಗೆ ಗೊತ್ತಾಗಿದೆ. ಫೇಸ್ ಬುಕ್ ಕಾಲ್ ನಲ್ಲಿ ಆತನ ಫೋಟೋ ನೋಡಲು ಯತ್ನಿಸಿದಾಗ ಅದು ಯಾವುದೋ ಸೇನಾಧಿಕಾರಿಯ ಫೋಟೋ ಮಾತ್ರ ಪ್ರೊಫೈಲ್ ಫೋಟೋ ಆಗಿ ಕಾಣಿಸುತ್ತಿತ್ತು. ಹಾಗಾಗಿ, ನಿಖರವಾಗಿ ಯಾರೆಂಬುದು ಸ್ಪಷ್ಟವಾಗಿರಲಿಲ್ಲ.
ಆತ ಕಳಿಸಿದ ಕ್ಯುಆರ್ ಕೋಡ್ ಸರಿಯಾಗಿ ಓಪನ್ ಆಗ್ತಾ ಇಲ್ಲ, ಇರಿ… ಮತ್ತೆ ಟ್ರೈ ಮಾಡ್ತೀನಿ ಎಂದು ಆತ ಕಾಯುವಂತೆ ಮಾಡಿ, ಇತ್ತ ಚಾಟ್ ಜಿಪಿಟಿಯನ್ನು ಓಪನ್ ಮಾಡಿ, ತಾನು ಪೇಮೆಂಟ್ ಮಾಡುವ ರೀತಿಯಲ್ಲಿ ತನ್ನ ಹೆಸರು ವಿವರಗಳಿರುವ ಒಂದು ನಕಲಿ ವೆಬ್ ಪೇಜ್ ಸೃಷ್ಟಿಸಿದ್ದಾನೆ. ಅದರಲ್ಲಿ ಟ್ರ್ಯಾಕಿಂಗ್ ಲಿಂಕ್ ಒಂದನ್ನು ಹಾಕಿ, ಅದನ್ನು ಆ ವ್ಯಕ್ತಿಗೆ ಕಳುಹಿಸಿದ್ದಾನೆ.
ಆ ನಕಲಿ ವೆಬ್ ಪೇಜ್ ಹಾಗೂ ಲಿಂಕ್ ಕಳಿಸಿ, ಸ್ವಲ್ಪ ನೋಡಿ ಚೆಕ್ ಮಾಡಿ. ನಾನು ಪೇಮೆಂಟ್ ಮಾಡ್ತಾ ಇದ್ದೇನೆ. ನೀವು ಕಳಿಸಿದ ಕ್ಯುಆರ್ ಕೋಡ್ ನ ಮಾಹಿತಿಗಳು ಸರಿಯಾಗಿವೆಯೇ ಎಂಬುದನ್ನು ಅದರಲ್ಲಿರುವ ಲಿಂಕ್ ಕ್ಲಿಕ್ ಮಾಡಿ ನೋಡಿ ಹೇಳಿ ಎಂದಿದ್ದಾನೆ. ಅದನ್ನು ನಂಬಿದ ಆ ಮೋಸಗಾರ, ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಇತ್ತ ದೆಹಲಿ ಯುವಕನಿಗೆ ಆ ಮೋಸಗಾರ ಇರುವ ಸ್ಥಳ ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಆಗಿದೆ. ಜೊತೆಗೆ, ಆ ಮೋಸಗಾರ ಕ್ಲಿಯರ್ ಫೋಟೊವೊಂದು ಈ ದೆಹಲಿ ಯುವಕನಿಗೆ ಬಂದಿದೆ.
ಕೂಡಲೇ ಮತ್ತೊಂದು ವೆಬ್ ಪುಟವನ್ನು ಚಾಟ್ ಜಿಟಿಪಿಯಿಂದಲೇ ಸಿದ್ಧಪಡಿಸಿದ ಆ ಯುವಕ, ಅದರಲ್ಲಿ ಆ ಮೋಸಗಾರನ ಫೋಟೋ, ಆತನ ಲೊಕೇಷನ್ ಎಲ್ಲವನ್ನೂ ಹಾಕಿ, ಈಗಾಗಲೇ ಪೊಲೀಸ್ ಇಲಾಖೆಗೆ ಆತನಿರುವ ಜಾಗದ ಮಾಹಿತಿ ಕಳಿಸಲಿರುವುದಾಗಿ ಆತನಿಗೆ ಸಂದೇಶ ಕಳಿಸಿದ್ದಾನೆ. ಈಗ ಗಾಬರಿ ಬೀಳುವ ಸರದಿ ಆ ಮೋಸಗಾರನದ್ದು! ತಾನಿರುವ ಲೊಕೇಷನ್, ತನ್ನ ಫೋಟೋ ಎಲ್ಲವೂ ಪೊಲೀಸರಿಗೆ ಕೊಡಲಿದ್ದೇನೆ ಎಂಬ ಸಂದೇಶವ ಕೂಡಲೇ, "ಸರ್, ನನ್ನನ್ನು ಬಿಟ್ಟುಬಿಡಿ. ಇನ್ನು ಯಾವತ್ತೂ ನಿಮ್ಮ ತಂಟೆಗೆ ಬರಲ್ಲ" ಎಂದು ಗೋಳಿಟ್ಟು ಕರೆ ಕಟ್ ಮಾಡಿದ್ದಾನೆ.
ಅದೆಲ್ಲವನ್ನೂ ಈ ದೆಹಲಿ ಯುವಕ ತಾನು ಮೊದಲು ಕಳಿಸಿದ್ದ ಲಿಂಕ್ ಮೂಲಕವೇ ವಿಡಿಯೋ ರೆಕಾರ್ಡ್ ಮಾಡಿದ್ದು ಆ ಕ್ಲಿಪ್ ಅನ್ನು ರೆಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿರುವ ನೂರಾರು ರೆಡಿಟ್ ಓದುಗರು, ಎಐ ತಂತ್ರಜ್ಞಾನವನ್ನು ಅತ್ಯುತ್ತಮ ಕೆಲಸಕ್ಕೆ ಬಳಸಿಕೊಂಡ ಉದಾಹರಣೆಯಿದು ಎಂದು ಕೊಂಡಾಡಿದ್ದಾರೆ. ಜೊತೆಗೆ, ಆ ಯುವಕನ ಸಮಯಪ್ರಜ್ಞೆಯನ್ನೂ ಶ್ಲಾಘಿಸಿದ್ದಾರೆ.
Post a Comment