Pre Wedding ಶೂಟಿಂಗ್ ಮುಗಿಸಿ ಬರುತ್ತಿದ್ದವರ ಮೇಲೆರಗಿದ ಜವರಾಯ…ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ!
ಅವರಿಬ್ಬರ ಮದುವೆ ಡಿಸೆಂಬರ್ 20 ರಂದು ನಡೆಯಲಿತ್ತು. ಆದರೆ, ವಿಧಿಯಾಟನೇ ಬೇರೆಯಾಗಿತ್ತು. ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಾಸಾಗುತ್ತಿದ್ದ ಭಾವಿದಂಪತಿ ದುರಂತ ಅಂತ್ಯ ಕಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಹನುಮನಹಟ್ಟಿ ಗ್ರಾಮದ ನಿವಾಸಿ, 26 ವರ್ಷದ ಕರಿಯಪ್ಪ ಮಡಿವಾಳ, ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ ಮಡಿವಾಳ ಮೃತಪಟ್ಟವರು. ಮುನಿರಾಬಾದ್ ನ ಪಂಪಾವನ, ಕೂಕನಪಳ್ಳಿಯ ಬೂದೇಶ್ವರ ದೇವಸ್ಥಾನ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಬಳಿಕ ಕರಿಯಪ್ಪ, ಕವಿತಾಳನ್ನು ಬೈಕ್ ಮೇಲೆ ಮುಷ್ಟೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಚಿಕ್ಕಬೆಣಕಲ್ ಗ್ರಾಮದ ಬಳಿ ಲಾರಿಯನ್ನು ಓವರ್ ಟೆಕ್ ಮಾಡುವಾಗ ಎದುರಿಗೆ ಬಂದ ಲಾರಿಯೊಂದು ಡಿಕ್ಕಿಯಾಗಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯು ಸಿರೆಳೆದಿದ್ದಾನೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇನ್ನು ಕರಿಯಪ್ಪನ ಜೊತೆಗೆ ಆತನ ಅಣ್ಣ ರಮೇಶ್ ನದ್ದು ಕೂಡ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಸಹೋದರರಿಬ್ಬರೂ ಸಹ ಫೋಟೋಶೂಟ್‌ಗೆ ತೆರಳಿದ್ದರು. ಫೋಟೋಶೂಟ್ ಬಳಿಕ ರಮೇಶ್ ಊರಿಗೆ ತೆರಳಿದರೆ, ಕರಿಯಪ್ಪ, ತನ್ನ ಭಾವಿ ಪತ್ನಿಯನ್ನು ಊರಿಗೆ ಬಿಡಲು ಹೊರಟಾಗ ಈ ದುರಂತ ಸಂಭವಿಸಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
Post a Comment