".

Header Ads

ಉಡುಪಿ: ನಿಯಂತ್ರಣಕ್ಕೆ ಬಾರದ ಏಡ್ಸ್‌; ಉಭಯ ಜಿಲ್ಲೆಗಳಲ್ಲಿ 5 ವರ್ಷದಲ್ಲಿ 648 ಸಾವು

 

ಏಡ್ಸ್‌ ನಿಯಂತ್ರಣಕ್ಕೆ ಸರಕಾರ ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆಯಾದರೂ ಸಾವನ್ನಪ್ಪುವವರ ಸಂಖ್ಯೆ ಹಾಗೂ ಎಚ್‌ ಐವಿ ಪೀಡಿತರ ಸಂಖ್ಯೆ ವರ್ಷಂಪ್ರತಿ ಹೆಚ್ಚಳವಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಏಡ್ಸ್‌ ಪ್ರಕರಣಗಳು ಈ ವರ್ಷ ಇಳಿಕೆ ಕಂಡಿದ್ದರೂ ಕಳೆದ 5 ವರ್ಷಗಳಲ್ಲಿ 517 ಮಂದಿ ಸಾವನ್ನಪ್ಪಿದ್ದಾರೆ.

1,119 ಮಂದಿ ಎಚ್‌ ಐವಿ ಪೀಡಿತರಾಗಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 100 ಮಂದಿ ಏಡ್ಸ್‌ ನಿಂದಾಗಿ ಸಾವನ್ನಪ್ಪುತ್ತಿದ್ದಾರೆ. 2021-22ರಲ್ಲಿ 90, 2022-2023ರಲ್ಲಿ 94, 2023-2024ರಲ್ಲಿ 145, 2024-2025ರಲ್ಲಿ 113, 2025-2026ರಲ್ಲಿ 75 ಮಂದಿ ಸಾವನ್ನಪ್ಪಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 131 ಮಂದಿ ಸಾವನ್ನಪ್ಪಿದ್ದಾರೆ. 2021-2022ರಲ್ಲಿ 36, 2022-2023ರಲ್ಲಿ 37, 2023-2024ರಲ್ಲಿ 28, 2024-2025ರಲ್ಲಿ 16, 2025-2026ರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ಎಚ್‌ಐವಿ ಸೋಂಕಿತರ ಚಿಕಿತ್ಸೆಗಾಗಿ ಉಡುಪಿ, ಕುಂದಾಪುರ, ಕೆಎಂಸಿ ಮಣಿಪಾಲ, ವೆನ್ಲಾಕ್‌ ಆಸ್ಪತ್ರೆ, ಎಲ್ಲ ಮೆಡಿಕಲ್‌ ಕಾಲೇಜುಗಳಲ್ಲಿ ಎಆರ್‌ಟಿ ಕೇಂದ್ರಗಳಿವೆ. ಎಚ್‌ಐವಿ ಸೋಂಕಿತರಿಗೆ ಸರಕಾರದ ಮೂಲಕ ಹಲವಾರು ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಅಂತ್ಯೋದಯ ಯೋಜನೆ, ಬಿಪಿಎಲ್‌ ಪಡಿತರ ಚೀಟಿ, ವಿಶೇಷ ಪಾಲನ ಯೋಜನೆ, ರಾಜೀವ್‌ ಗಾಂಧಿ ವಸತಿ ಯೋಜನೆ ಇವುಗಳಲ್ಲಿ ಸೇರಿವೆ.

ಹೆಚ್ಚಳಕ್ಕೆ ಕಾರಣ
ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕು ಇರುವ ವ್ಯಕ್ತಿಯಿಂದ ರಕ್ತ ಪಡೆಯುವುದು, ಸೋಂಕು ಇರುವ ವ್ಯಕ್ತಿ ಉಪಯೋಗಿಸಿದ ಸಿರಿಂಜ್‌, ಸೂಜಿ ಹಾಗೂ ಇತರ ಉಪಕರಣಗಳನ್ನು ಸಂಸ್ಕರಿಸದೆ ಬಳಕೆ ಮಾಡುವುದು, ಸೋಂಕು ಇರುವ ತಾಯಿಯಿಂದ ಜನಿಸುವ ಮಗು. ಇತ್ಯಾದಿ ಕಾರಣಗಳಿಂದಾಗಿ ಏಡ್ಸ್‌ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂಬುವುದು ಅಧಿಕಾರಿಗಳ ಅನಿಸಿಕೆ.

ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾಕರು ಈಗಲೂ ಸಕ್ರಿಯವಾಗಿ ಕಾರ್ಯಾಚರಣೆ ಮಾಡುತ್ತಿರುವುದು ಕೂಡ ಒಂದು ಕಾರಣವಾಗಿದೆ. ಮುಖ್ಯವಾಗಿ ಟೋಲ್‌ ಗೇಟ್‌ ಗಳು, ನಗರ ಭಾಗದ ಬಸ್ಸು ತಂಗುದಾಣಗಳು, ಹೆದ್ದಾರಿ ಬದಿಗಳಲ್ಲಿ ಈ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಇದು ಕೂಡ ಸೋಂಕು ಹೆಚ್ಚಳವಾಗಲು ಕಾರಣ ಎನ್ನಲಾಗುತ್ತಿದೆ. ಹೊಸ ಜಿಲ್ಲೆ, ರಾಜ್ಯಗಳಿಂದ ಆಗಮಿಸಿ ಇಲ್ಲಿ ಅಸುರಕ್ಷಿತ ಚಟುವಟಿಕೆ ನಡೆಸುವ ಬಗ್ಗೆ ಈಗಾಗಲೇ ಪೊಲೀಸ್‌ ಇಲಾಖೆಯೂ ನಿಗಾ ಇರಿಸಿದ್ದು, ನಿರಂತರ ಕಾರ್ಯಾಚರಣೆಗಳನ್ನೂ ಮಾಡಲಾಗುತ್ತಿದೆ.

Powered by Blogger.