ಕಾರ್ಕಳ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ
ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ತಾಮ್ರದ ಹೊದಿಕೆಯನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನ ಮುಖ್ಯ ದ್ವಾರವನ್ನು ಆಯುಧದಿಂದ ಮೀಟಿ ಬಾಗಿಲನ್ನು ಒಡೆದು, ಒಳನುಗ್ಗಿದ ಕಳ್ಳರು, ಇಲ್ಲಿನ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳ್ಳತನ ಮಾಡಿದ್ದಾರೆಂದು ದೂರಲಾಗಿದೆ.
ಜ.3ರಂದು ಸಂಜೆ ವೇಳೆ ಪಾರ್ಕ್‌ನ ಮಾಜಿ ಕವಾಲುಗಾರ ಬೈಲೂರಿನ ಸಂತೋಷ್, ಈ ವಿಷಯವನ್ನು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ರಿಗೆ ಮಾಹಿತಿ ನೀಡಿದ್ದು, ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಠಾಣಾ ಉಪನಿರೀಕ್ಷಕ ಶಿವಕುಮಾರ್ ಎಸ್.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಸೋಕೋ ತಂಡ ಆಗಮಿಸಿ ಘಟನಾ ಸ್ಥಳದಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕಿನಲ್ಲಿ ಕಳ್ಳತನ ಪ್ರಕರಣ ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ: ಶಾಸಕ ಸುನಿಲ್ ಕುಮಾರ್
ಕಾರ್ಕಳ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿದೆ, ಕಳೆದ ಎರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದರು. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ.ಬಹುಶಃ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉದಯ್ ಕುಮಾರ್ ಶೆಟ್ಟಿಯವರ ಹೊಟ್ಟೆ ಇವತ್ತು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು. ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದೂ ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳು ಬೀಳಿಸಿದರು.
ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್ ಗೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿದ್ದರೂ, ಕೆಲವರು ಕಾನೂನು ಬಾಹಿರವಾಗಿ ಇಲ್ಲಿಗೆ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು.ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜತೆಗೆ ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಶಾಸಕ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಸುನಿಲ್ ಕುಮಾರ್ ನೇರ ಹೊಣೆ:ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಇಲ್ಲಿನ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ, ದುಸ್ಥಿತಿಗೆ ಶಾಸಕ ಸುನಿಲ್ ಕುಮಾರ್ ನೇರ ಹೊಣೆ ಎಂದಿದ್ದಾರೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ಎರಡನೆಯ ಬಾರಿ ಕಳ್ಳತನ ನಡೆದಿದೆ. ಈ ಹಿಂದೆ ಕಂಚಿನ ಬದಲು ಪರಶುರಾಮರ ಫೈಬರ್ ಮಿಶ್ರಿತ ನಕಲಿ ಪ್ರತಿಮೆ ನಿರ್ಮಿಸಿ ಅದರಲ್ಲಿಯೂ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಸುನೀಲ್ ಕುಮಾರ್ ನಿರ್ದೇಶನದಂತೆ ಕಳ್ಳತನ ನಡೆಸಲಾಗಿತ್ತು. ಈಗ ತಾಮ್ರದ ಹೊದಿಕೆ ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Post a Comment