ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ 'ರಾಗಿ' :ಇಲ್ಲಿದೆ ಮಾಹಿತಿ
ರಾಗಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಅನುಕೂಲವಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳೊಗಣ 'ಆರೋಗ್ಯ ಸಿರಿ'ಯ ಬಗ್ಗೆ ಹೆಚ್ಚು ಜಾಗೃತಿ ಮೂಡಿರುವುದರಿಂದಲೇ ಮಾರುಕಟ್ಟೆಯಲ್ಲೂ ರಾಗಿಗೆ ಬೇಡಿಕೆ ಹೆಚ್ಚಿದೆ.
ಒಂದು ಕಾಲದಲ್ಲಿ ಆಹಾರಗಳ ಅರಸೊತ್ತಿಗೆಯಲ್ಲಿದ್ದ ಸಿರಿಧಾನ್ಯಗಳು, ಆಧುನಿಕ ಆಹಾರ ಪದ್ಧತಿಯಿಂದ ನಲುಗಿದ್ದಂತೂ ಸತ್ಯ. ಆಹಾರ ಹಾಗೂ ಆರೋಗ್ಯ ಕಾಳಜಿ ಹೆಚ್ಚುತ್ತಿರುವ ಈ ಸಮಯದಲ್ಲಿ ಮತ್ತೆ ಸಿರಿಧಾನ್ಯಗಳು ಮಹತ್ವ ಪಡೆದುಕೊಂಡಿವೆ.
ವೈಜ್ಞಾನಿಕವಾಗಿ ಅಕ್ಕಿಗಿಂತ ಹತ್ತಾರುಪಟ್ಟು ಪ್ರೋಟೀನ್, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ಸೋಡಿಯಂ ಖನಿಜಗಳನ್ನು ಒಳಗೊಂಡಿರುವ ರಾಗಿ, ಪ್ರಪಂಚದ ಮಿಲೆಟ್ ಗುಂಪಿನ ಬೆಳೆಗಳಲ್ಲಿ ಜೋಳ ಮತ್ತು ಸಜ್ಜೆಯ ನಂತರದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ರಾಗಿ ಬೇಸಾಯದಲ್ಲಿ ಭಾರತಕ್ಕೆ ಜಗತ್ತಿನಲ್ಲಿಯೇ ಮೊದಲ ಸ್ಥಾನವಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಗಿಯನ್ನು ಬೆಳೆಯಲಾಗುತ್ತದೆ. ರಾಗಿಗೆ ದೇಶದಲ್ಲೇ ಅತ್ಯಂತ ಹೆಚ್ಚಿನ ಕೃಷಿ ಪ್ರದೇಶ ಹೊಂದಿರುವ ನಾಡು ಕರ್ನಾಟಕ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ರಾಗಿಯನ್ನು ಮುಂಗಾರು ಮತ್ತು ಹಿಂಗಾರಿನ ಬೆಳೆಯಾಗಿಯೂ ಬೆಳೆಯಲಾಗುತ್ತದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಅಯಾ ಪ್ರದೇಶದ ಹವಾಗುಣಕ್ಕೆ ತಕ್ಕಂತೆ ರಾಗಿಯನ್ನು ಬೆಳೆಯಲಾಗುತ್ತದೆ.
ರಾಗಿಯ ಮೂಲ...
ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದ ಬಯಲುಸೀಮೆಯ ಪ್ರಧಾನ ಬೆಳೆ ರಾಗಿ. ಕನಕದಾಸರ 'ರಾಮಧಾನ್ಯ ಚರಿತೆ'ಯೂ ಸೇರಿದಂತೆ ಹಲವೆಡೆ ರಾಗಿಯ ಬಗ್ಗೆ ಅನೇಕ ಉಲ್ಲೇಖಗಳಿವೆ. 'ಹೊಟ್ಟೆತುಂಬ ಹಿಟ್ಟು ಬಾಯ್ತುಂಬ ಅನ್ನ' ಎಂಬ ಗಾದೆ ಮಾತಿನಂತೆ, ಬಹುಸಂಖ್ಯಾತ ಶ್ರಮಿಕರ ತೋಳು ತೊಡೆಗಳ ಶಕ್ತಿಯ ಪ್ರಧಾನ ಆಹಾರ ರಾಗಿಯೇ ಆಗಿದೆ. ರಾಗಿ ಬಳಕೆಯ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಅದರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ದಕ್ಷಿಣ ಆಫ್ರಿಕಾವೇ ರಾಗಿಯ ಮೂಲ ಎಂಬುದು ವಿಶ್ವದ ತಳಿತಜ್ಞರ ಅಧ್ಯಯನದಿಂದ ತಿಳಿದುಬಂದಿದೆ.
ಆದಾಗ್ಯೂ, ದಕ್ಷಿಣ ಆಫ್ರಿಕಾದೊಂದಿಗೆ ಭಾರತವು ಕೂಡ ರಾಗಿಯ ತವರೂರು ಎಂಬುದಕ್ಕೆ ಹಲವಾರು ಗುರುತರ ಪುರಾವೆಗಳಿವೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ರಾಗಿಯ ಮಹತ್ವದ ಹೆಚ್ಚಿಸಿದ 'ರಾಗಿಲಕ್ಷ್ಮಣಯ್ಯ'
ಜಗತ್ತಿನ ಶ್ರೇಷ್ಠ ಆಹಾರದ ಸಾಲಿನಲ್ಲಿ ನಿಲ್ಲುವಂತಹ ಧಾನ್ಯ ರಾಗಿ. ಅಂತ ಧಾನ್ಯದ ಉತ್ಕೃಷ್ಟ ತಳಿಗಳ ಜನಕ ಮೈಸೂರು ಜಿಲ್ಲೆಯ ಹಾರೋಹಳ್ಳಿಯ ರಾಗಿಲಕ್ಷ್ಮಣಯ್ಯ. ಜಗತ್ತಿನ ಬಹುತೇಕ ಶ್ರಮ ಸಮುದಾಯಗಳ ಬಹುಮುಖ್ಯ ಆಹಾರ ರಾಗಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿದವರು ಅವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಧಾನವಾದ ವಿಷಯದಲ್ಲಿ ಅಧ್ಯಯನ ಮಾಡಿ ಬಿ.ಎಸ್ಸಿ ಪದವೀಧರರಾಗಿದ್ದಾರೆ. ಮಂಡ್ಯದ ವಿ.ಸಿ ಫಾರಂಗೆ ಕಿರಿಯ ಸಹಾಯಕ ವಿಜ್ಞಾನಿಯಾಗಿದ್ದ ಸಂದರ್ಭದಲ್ಲಿ ಲಕ್ಷ್ಮಣಯ್ಯ ಅವರು, ತಪಸ್ಸಿನಂತೆ ರಾಗಿ ತಳಿಗಳ ಬಗ್ಗೆ ಅಧ್ಯಯನದಲ್ಲಿ ನಿರತರಾಗಿದ್ದರು. 'ಅರುಣ', 'ಉದಯ', 'ಪೂರ್ಣ', 'ಅನ್ನಪೂರ್ಣ', 'ಕಾವೇರಿ' ಎಂಬ ವಿವಿಧ ರಾಗಿ ತಳಿಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.
ಋತುಮಾನ, ಹವಾಮಾನಗುಣಕ್ಕೆ ಅನುಗುಣವಾದ ತಳಿಗಳನ್ನು ಲಕ್ಷ್ಮಣಯ್ಯನವರು ಕಂಡು ಹಿಡಿದಿದ್ದಾರೆ. ತಾವು ನಿವೃತ್ತಿಯಾಗುವವರೆಗೆ ದಕ್ಷಿಣ ಆಫ್ರಿಕಾ ಮತ್ತು ಇಂಡಿಯಾದ ರಾಗಿಗಳಲ್ಲಿ ಆನುವಂಶಿಕವಾಗಿ ಅಂತರವಿರುವುದನ್ನು ಹೆಜ್ಜೆಹೆಜ್ಜೆಗೂ ಗಾಢವಾಗಿ ಅಧ್ಯಯನ ಮಾಡಿ, ಆಫ್ರಿಕಾ ಮತ್ತು ಇಂಡಿಯಾ ತಳಿಗಳನ್ನು ಬೆಸೆದು ಸಮ್ಮಿಲನಗೊಳಿಸಿ ಅಪಾರ ಶ್ರಮದಿಂದ ಕೆಂಪುರಾಗಿ, ಕಪ್ಪುರಾಗಿ ತಳಿಗಳನ್ನು ಸಹ ಸಂಶೋಧಿಸಿದ್ದಾರೆ. ಆಫ್ರಿಕಾ-ಇಂಡಿಯಾ ಈ ಎರಡು ದೇಶಗಳಿಗೂ ನ್ಯಾಯಯುತವಾಗಿ ಸಲ್ಲಬೇಕಾಗಿರುವುದನ್ನು ಚಿಂತಿಸಿ ರಾಗಿ ತಳಿಗಳಿಗೆ 'ಇಂಡಾಫ್' ರಾಗಿ ಎಂದು ಹೆಸರಿಸಿದ್ದಾರೆ. ಈ ತಳಿಗಳು ರಾಗಿ ಪ್ರಪಂಚದಲ್ಲಿ ಅಚ್ಚಳಿಯದೆ ಉಳಿದು ರಾಗಿ ಕ್ರಾಂತಿಗೆ ಕಾರಣವಾಗಿವೆ.
ಪ್ರಪಂಚದ ರೈತಾಪಿಲೋಕಕ್ಕಂತೂ ಈ ರಾಗಿ ತಳಿಗಳು ಸಂಜೀವಿನಿಯಾಗಿ ಕಂಡವು. ಲಕ್ಷ್ಮಣಯ್ಯನವರು ತಾವು ಕಂಡು ಹಿಡಿದ ಈ ರಾಗಿ ತಳಿಗಳಿಗನುಗುಣವಾಗಿ ಇಂಡಾಫ್-1, 2, 3, 4, 5, 6, 7, 8, ಹೀಗೆ ಹೆಸರಿಡುತ್ತ ಹೋದರು. ಉತ್ತಮ ನೀರಾವರಿಯಲ್ಲಿ ಇಂಡಾಫ್-5 ಎಕರೆಗೆ 65 ಕ್ವಿಂಟಲ್ ಬೆಳೆದು ದಾಖಲೆಯನ್ನು ನಿರ್ಮಿಸಿದೆ.
ರಾಗಿ ವೈಶಿಷ್ಟ್ಯ
ದೇಶಿ ರಾಗಿ ತಳಿಗಳಲ್ಲಿ ಕೆಂಪು ಅಥವಾ ಕಪ್ಪು ತಳಿಗಳು ಮಾತ್ರ ಚಾಲ್ತಿಯಲ್ಲಿವೆ. ಆದರೆ ಬಿಳಿ ರಾಗಿ ತಳಿ ಇವುಗಳಿಗಿಂತ ಭಿನ್ನ. ನಮ್ಮಲ್ಲಿನ ಅನೇಕ ರಾಗಿ ತಳಿಗಳ ಪೋಷಕಾಂಶಗಳ ಪೈಕಿ ಶೇ.2ರಷ್ಟು ಅಧಿಕ ಪೋಷಕಾಂಶಗಳು ಈ ಬಿಳಿ ರಾಗಿಯಲ್ಲಿವೆ. ಅಕ್ಕಿಯಲ್ಲಿ 70 ಗ್ರಾಂ ಕ್ಯಾಲ್ಸಿಯಂ ಇದ್ದರೆ ಬಿಳಿ ರಾಗಿಯಲ್ಲಿ 380 ರಿಂದ 390 ಗ್ರಾಂ ಕ್ಯಾಲ್ಸಿಯಂ ಇದೆ. ಇತರ ಆಹಾರದಲ್ಲಿ 0.5 ನಾರಿನ ಅಂಶ ಇದ್ದರೆ, ಈ ರಾಗಿಯಲ್ಲಿ 10 ರಿಂದ 12 ಗ್ರಾಂನಷ್ಟು ನಾರಿನ ಅಂಶವಿದೆ. ಕಬ್ಬಿಣ, ಪ್ರೋಟೀನ್ ಇತರ ಆಹಾರಕ್ಕಿಂತ ಅಧಿಕ ಪ್ರಮಾಣದಲ್ಲಿದೆ ಎನ್ನುತ್ತಾರೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಸಿ.ಆರ್.ರವಿಶಂಕರ್.
ಭಾರತದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ 2500 ರಾಗಿ ತಳಿಗಳ ಜತೆ ದಕ್ಷಿಣ ಆಫ್ರಿಕಾ, ಕಿನ್ಯಾ, ಜಿಂಬಾಬ್ವೆ, ಉಗಾಂಡ, ಸೇರಿ ಇನ್ನಿತರ ದೇಶಗಳಿಂದ ರಾಗಿ ತಳಿಗಳನ್ನು ಸಂಕರಗೊಳಿಸಿಲು ಯತ್ನಿಸಿದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಂಡಕ್ಕೆ, ದಕ್ಷಿಣ ಆಫ್ರಿಕಾದ ರಾಗಿ ತಳಿಯ ಜತೆ ಕರ್ನಾಟಕದ ರಾಗಿ ತಳಿಯೊಂದನ್ನು ಸಂಕರಗೊಳಿಸಿದಾಗ ಈ 'ಬಿಳಿ ರಾಗಿ' ತಳಿ ಸೃಷ್ಟಿಯಾಗಿದೆ. ಈ ತಳಿಯನ್ನು 'ಕರ್ನಾಟಕ-ಮಂಡ್ಯ ಬಿಳಿರಾಗಿ (ಕೆ.ಎಂ.ಆರ್.340)' ಎಂದು ಗುರುತಿಸಲಾಗಿದೆ ಎನ್ನುತ್ತಾರೆ ರವಿಶಂಕರ್.
ರಾಗಿಯ ಪ್ರಯೋಜನಗಳು...
ಸಿರಿಧಾನ್ಯಗಳಲ್ಲಿ ಒಂದಾಗಿರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದ್ಭುತ ಆರೋಗ್ಯ ಲಾಭ ಸಿಗುತ್ತದೆ. ರಾಗಿ ಮುದ್ದೆ, ನಾಟಿ ಕೋಳಿ ಸಾರು ಎಂದರೆ ಅನೇಕರ ಬಾಯಲ್ಲಿ ನೀರೂರಿಸುತ್ತದೆ. ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರಾಗಿ ಮುದ್ದೆಯನ್ನು ಪ್ರತಿನಿತ್ಯವೂ ಆಹಾರ ಕ್ರಮದಲ್ಲಿ ಬಳಕೆ ಮಾಡುತ್ತಿದ್ದಾರೆ.
ಇನ್ನು ಕೆಲವರು ರಾಗಿಯನ್ನು ರೊಟ್ಟಿ, ದೋಸೆ, ಉಪ್ಪಿಟ್ಟು, ಅಂಬಲಿ, ಹಲ್ವಾ ಮಾಡಿಕೊಂಡು ಬಳಸುತ್ತಾರೆ. ರಾಗಿಯಲ್ಲಿರುವ ಹಲವು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ರಾಗಿಯಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ ಎಂಬುದನ್ನು ತಿಳಿಯೋಣ.
ಕ್ಯಾಲ್ಸಿಯಂ ಆಗರ
ಯಾವುದೇ ಧಾನ್ಯಗಳಲ್ಲಿ ಇಲ್ಲದೆ ಇರುವಂತಹ ಕ್ಯಾಲ್ಸಿಯಂ ಅಂಶವು ರಾಗಿಯಲ್ಲಿದ್ದು, ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು. ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುತ್ತವೆ.
ಅಧಿಕ ನಾರಿನಾಂಶ
ರಾಗಿಯಲ್ಲಿರುವ ನಾರಿನಾಂಶವು ಮಲಬದ್ದತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ನೆರವಾಗುತ್ತದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ರಾಗಿಯಲ್ಲಿ ನಾರಿನಾಂಶವು ಹೆಚ್ಚಿರುತ್ತದೆ. ಪಾಲಿಫೆನಾಲ್ ಅಂಶವು ರಾಗಿಯಲ್ಲಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು.
ಅಮಿನೋ ಆಮ್ಲ
ರಾಗಿಯಲ್ಲಿ ಲೆಸಿಥಿನ್ ಮತ್ತು ಮೆಥಿಯೋನಿನ್ ಎನ್ನುವ ಅಮಿನೋ ಆಮ್ಲವು ಇರುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇದು ತಗ್ಗಿಸುವುದು. ಜತೆಗೆ ಯಕೃತ್‌ಗೆ ಕೊಬ್ಬು ಕರಗಿಸಲು ನೆರವಾಗುತ್ತದೆ.
ಕಬ್ಬಿಣಾಂಶ ಮತ್ತು ವಿಟಮಿನ್ 'ಸಿ'
ರಾಗಿಯಲ್ಲಿ ಇರುವಂತಹ ಕಬ್ಬಿಣಾಂಶವು ಮತ್ತು ವಿಟಮಿನ್ 'ಸಿ' ರಕ್ತಹೀನತೆ ನಿವಾರಣೆ ಮಾಡುವ ಮೂಲಕ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುತ್ತದೆ.
ಗ್ಲುಟೇನ್ ಮುಕ್ತ
ಗ್ಲುಟೇನ್ ಸೂಕ್ಷ್ಮತೆ ಇರುವವರಿಗೆ ರಾಗಿಯು ವರದಾನವಾಗಿದೆ. ಬೇರೆ ಧಾನ್ಯಗಳಲ್ಲಿ ಗ್ಲುಟೇನ್ ಅಂಶ ಹೆಚ್ಚಿರುವುದರಿಂದ ರಾಗಿಯಲ್ಲಿ ಇದು ಶೂನ್ಯವಾಗಿದೆ.
ತೂಕ ಇಳಿಕೆಗೆ ಸಹಕಾರಿ
ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿ ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇದೆ ಮತ್ತು ಒಳ್ಳೆಯ ಕೊಬ್ಬನ್ನು ಹೊಂದಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ರಾಗಿಯನ್ನು ಅನ್ನ ಮತ್ತು ಗೋಧಿ ಬದಲಿಗೆ ಬಳಕೆ ಮಾಡಬಹುದು. ಅಮಿನೋ ಆಮ್ಲವು ತೂಕ ಇಳಿಕೆಗೆ ಸಹಕಾರಿಯಾಗಲಿದೆ.
ನೈಸರ್ಗಿಕ ಖಿನ್ನತೆ ನಿವಾರಕ
ರಾಗಿಯನ್ನು ಪ್ರತಿನಿತ್ಯ ಬಳಸುವುದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡಬಹುದು. ಇದರಲ್ಲಿ ಇರುವಂತಹ ಅಮಿನೋ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಕವಾಗಿ ಕೆಲಸ ಮಾಡುವುದು. ನಿಯಮಿತವಾಗಿ ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಒಳ್ಳೆಯದು.
ಮಕ್ಕಳಿಗೆ ಪೋಷಕಾಂಶ ಒದಗಿಸುತ್ತದೆ
ಮಕ್ಕಳಿಗೆ ರಾಗಿ ನೀಡಿದರೆ ಅದು ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ರಾಗಿಯು ಮಕ್ಕಳಲ್ಲಿ ತೂಕ ಹೆಚ್ಚಿಸುವ ಮೂಲಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ನರ ವ್ಯವಸ್ಥೆ ಬಲಪಡಿಸುತ್ತದೆ
ಟ್ರಿಪ್ಟೊಫಾನ್ ಎನ್ನುವ ಅಮಿನೋ ಆಮ್ಲವು ರಾಗಿಯಲ್ಲಿ ಅಧಿಕ ಮಟ್ಟದಲ್ಲಿದ್ದು, ಇದು ನರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜತೆಗೆ, ನೆನಪಿನ ಶಕ್ತಿ ಉತ್ತೇಜಿಸುವುದರ ಜತೆಗೆ ಮನಸ್ಸನ್ನು ಶಾಂತವಾಗಿಸುತ್ತದೆ.

Post a Comment