".

Header Ads

ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು–ಮಿಂಚು ಸಹಿತ ಭಾರಿ ಅಕಾಲಿಕ ಮಳೆ


 ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಇಂದು ಅಕಾಲಿಕ ಮಳೆ ಸುರಿದಿದ್ದು, ಸಂಕ್ರಾಂತಿ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ.

 ವಾಯುಭಾರ ಕುಸಿತದ ಪರಿಣಾಮವಾಗಿ ಮಕರ ಸಂಕ್ರಾಂತಿ ಹಬ್ಬದ ಮುನ್ನಾದಿನವೇ ಸುರಿದ ಈ ಮಳೆ ಕುಕ್ಕೆಗೆ ಆಗಮಿಸಿದ ಭಕ್ತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೀವ್ರ ಅಸೌಕರ್ಯ ಉಂಟುಮಾಡಿತು.

ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳನ್ನು ಒಳಗೊಂಡಂತೆ ಕಡಬ, ನೆಟ್ಟಣ, ಕುಕ್ಕೆ ಸುಬ್ರಹ್ಮಣ್ಯ, ಕೋಡಿಂಬಾಳ, ಪಂಜ ಸೇರಿದಂತೆ ಸುಳ್ಯ ತಾಲೂಕಿನ ಹಲವೆಡೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು. ಸಂಜೆ ವೇಳೆ ದಿಢೀರನೆ ಅಬ್ಬರಿಸಿದ ಮಳೆರಾಯನಿಂದಾಗಿ ಕಚೇರಿಯಿಂದ ಮನೆಗೆ ಮರಳುತ್ತಿದ್ದವರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

2026ರ ಹೊಸ ವರ್ಷದ ಆರಂಭದಲ್ಲೇ ಸುರಿದ ಈ ಅಕಾಲಿಕ ಮಳೆಯು ಈ ಭಾಗದ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ. ಚಳಿಗಾಲದ ಮಧ್ಯೆ ಸುರಿದ ಈ ಮಳೆಯು ಹವಾಮಾನ ವೈಪರಿತ್ಯದ ಸಂಕೇತವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಕೆಲ ಪ್ರದೇಶಗಳಲ್ಲಿ ರಸ್ತೆ ಬದಿಯ ಚರಂಡಿಗಳು ಉಕ್ಕಿ ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

 ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಆಗಮಿಸಿದ್ದ ಭಕ್ತರು ಮಳೆಗೆ ಸಿಲುಕಿ ಹೈರಾಣಾದರು. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹಾಗೂ ದೇವಳದತ್ತ ತೆರಳುತ್ತಿದ್ದ ಭಕ್ತಾದಿಗಳು ಸೂಕ್ತ ಆಸರೆಯಿಲ್ಲದೆ ಮಳೆಯಲ್ಲಿ ನಿಂತು ಕಾದು ಕಷ್ಟ ಅನುಭವಿಸಿದರು. ಕೆಲ ಭಕ್ತರು ಮಳೆ ಕಡಿಮೆಯಾಗುವವರೆಗೆ ಅಂಗಡಿ ಮುಂಗಟ್ಟುಗಳು ಹಾಗೂ ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದರು.

Powered by Blogger.