ಮಂತ್ರಾಲಯದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್‌ನಲ್ಲಿ ದರೋಡೆ; 90 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಮಂತ್ರಾಲಯದಿಂದ ಮಂಗಳೂರಿಗೆ ಬರುತ್ತಿದ್ದ ದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ನಾಲ್ವರು ಖದೀಮರು ಬರೋಬ್ಬರಿ 90 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ದರೋಡೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಹೊರವಲಯದಲ್ಲಿ ಸಂಭವಿಸಿದೆ. ಹೋಟೆಲ್ ಒಂದರ ಮುಂಭಾಗದಲ್ಲಿ ಈ ಕೃತ್ಯ ನಡೆದಿದ್ದು, ದರೋಡೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ದರೋಡೆಕೋರರು ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಸಿಂಧನೂರಿನಿಂದಲೇ ಅದೇ ಬಸ್ ಹತ್ತಿ ಪ್ರಯಾಣಿಕರ ಮೇಲೆ ಕಣ್ಣಿಟ್ಟಿದ್ದ. ಉಳಿದ ಮೂವರು ಖದೀಮರು ಬಸ್ಸನ್ನು ಬೇರೆ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು.
‘ಶ್ರೀ ಕುಮಾರ್’ ಹೆಸರಿನ ಖಾಸಗಿ ಬಸ್ ಕೊಪ್ಪಳದ ಹೊರವಲಯದಲ್ಲಿ ರಾತ್ರಿ ಊಟಕ್ಕಾಗಿ ಹೋಟೆಲ್ ಒಂದರ ಬಳಿ ನಿಂತಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರಾದ ಮಹಮ್ಮದ್ ಮತ್ತು ಇರ್ಷಾದ್ ಎಂಬುವವರು ಊಟಕ್ಕೆ ಕೆಳಗಿಳಿದಿದ್ದರು. ಈ ಸಮಯಕ್ಕಾಗಿ ಕಾಯುತ್ತಿದ್ದ ಖದೀಮರು, ಕ್ಷಣಾರ್ಧದಲ್ಲಿ ಬಸ್ ಹತ್ತಿ ಅವರ ಬ್ಯಾಗಿನಲ್ಲಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಚೀಲವನ್ನು ಎಗರಿಸಿ ಪರಾರಿಯಾಗಿದ್ದಾರೆ.
ದರೋಡೆಕೋರರು ಬಸ್ ಹತ್ತುವುದು ಮತ್ತು ಬಂಗಾರದ ಚೀಲದೊಂದಿಗೆ ಪರಾರಿಯಾಗುವ ದೃಶ್ಯಗಳು ಹೋಟೆಲ್‌ನ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಈ ದೃಶ್ಯಾವಳಿಗಳನ್ನು ಆಧರಿಸಿ ಕೊಪ್ಪಳ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

Post a Comment