ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಹೆದ್ದಾರಿ ಅಪಘಾತಕ್ಕೆ ಬಲಿ
ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆಂದು ಬೆಂಗಳೂರಿನಿಂದ ಹೊರಟಿದ್ದ ಒಂದೇ ಕುಟುಂಬದ ದಂಪತಿ ಹಾಗೂ ನಾಲ್ಕು ವರ್ಷದ ಹೆಣ್ಣು ಮಗು, ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿಯ ಬಂಗಾರುಪಾಳ್ಯದ ಪಲಮಕುಲಪಲ್ಲಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಲಮನೇರ್‌ನಿಂದ ಚಿತ್ತೂರಿಗೆ ತೆರಳುತ್ತಿದ್ದ ಬಸ್ಸು, ರಾಷ್ಟ್ರೀಯ ಹೆದ್ದಾರಿಯ ಪಲಮಕುಲಪಲ್ಲಿ ಬಳಿ ರಸ್ತೆ ಬದಿಯಲ್ಲಿ ನಿಂತಿತ್ತು. ಈ ವೇಳೆ ಬೆಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಕಾರು, ನಿಂತಿದ್ದ ಬಸ್ಸಿನ ಹಿಂಭಾಗಕ್ಕೆ ಅತೀ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗವು ಬಸ್ಸಿನ ಅಡಿಯಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ದಂಪತಿ ಹಾಗೂ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ಕುಟುಂಬವು ಇಂದು ಮಧ್ಯಾಹ್ನ 12 ಗಂಟೆಗೆ ಶ್ರೀವಾರಿ ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿತ್ತು. ದರ್ಶನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಸಂಭವಿಸಿದ ಈ ಸಾವು ಶೋಕದ ಸಾಗರವನ್ನೇ ಹರಿಸಿದೆ. ಇನ್ನು ಕಾರು ಚಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಬಸ್ಸಿನ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ಕಾರನ್ನು ಹೊರತೆಗೆಯಲು ಪೊಲೀಸರು ಜೆಸಿಬಿ ಯಂತ್ರದ ಮೊರೆ ಹೋಗಬೇಕಾಯಿತು. ಸದ್ಯ ಬಂಗಾರುಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತಪಟ್ಟ ಬೆಂಗಳೂರು ಮೂಲದ ದಂಪತಿಯ ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ವೇಗವೇ ಈ ಭೀಕರ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

Post a Comment