ತಂದೆಯನ್ನೇ ಚೀಲದಲ್ಲಿ ಕಟ್ಟಿ ಕೊರಿಯರ್ ಮಾಡಲು ಮುಂದಾದ ಮಗಳು!
ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದ ಈ ಘಟನೆ ಅತ್ಯಂತ ಆಘಾತಕಾರಿ ಮತ್ತು ಅಮಾನವೀಯವಾಗಿದ್ದರೂ, ಇದರ ಹಿಂದಿರುವ ಅಸಲಿ ಕಾರಣ ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚಾಟ ಎಂಬುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ವಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೊರಿಯರ್ ಕಚೇರಿಯೊಂದಕ್ಕೆ ಮಂಗಳವಾರ ಮಹಿಳೆಯೊಬ್ಬಳು ತನ್ನ ಕುಟುಂಬದೊಂದಿಗೆ ಕೊರಿಯರ್ ಮಾಡಲು ಬಂದಿದ್ದಳು. ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿ ದೊಡ್ಡದೊಂದು ಪಾರ್ಸೆಲ್ ಹೊತ್ತುಕೊಂಡು ಬಂದಿದ್ದರು.
ಪಾರ್ಸೆಲ್ ಗಾತ್ರ ದೊಡ್ಡದಾಗಿದ್ದು, ಚೀಲದ ಒಳಗೆ ಏನೋ ಕದಲುತ್ತಿರುವುದನ್ನು ಗಮನಿಸಿದ ಕೊರಿಯರ್ ಕಚೇರಿ ಸಿಬ್ಬಂದಿ ಅನುಮಾನಗೊಂಡು ಚೀಲ ತೆರೆದಾಗ ಸಿಬ್ಬಂದಿ ದೃಶ್ಯ ಕಂಡು ಒಮ್ಮೆಲೆ ದಂಗಾಗಿದ್ದಾರೆ. ವೃದ್ಧ ತಂದೆ ಉಸಿರಾಡಲು ಕಷ್ಟಪಡುತ್ತಾ ಒಳಗೆ ಕುಂತಿರುವುದು ಕಂಡುಬಂದಿದೆ.
ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಸ್ ಮತ್ತು ವಿಮಾನ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಪ್ರಯಾಣ ಅಸಾಧ್ಯವಾಗಿದೆ ಎಂಬುದನ್ನು ವ್ಯಂಗ್ಯವಾಗಿ ತೋರಿಸಲು ಈ ರೀತಿ ‘ಮನುಷ್ಯ ಪಾರ್ಸೆಲ್’ ಮಾಡುವ ರೀಲ್ಸ್ ಚಿತ್ರೀಕರಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಡೀ ಕುಟುಂಬವನ್ನು ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಆ ಕುಟುಂಬವು ಕ್ಷಮೆಯಾಚನೆಯ ವಿಡಿಯೋ ಮಾಡಿದ್ದು, ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಅಥವಾ ವಿಡಿಯೋ ವೈರಲ್ ಆಗಲಿ ಎಂಬ ಉದ್ದೇಶದಿಂದ ಸ್ವಂತ ತಂದೆಯನ್ನೇ ಇಂತಹ ಅಪಾಯಕ್ಕೆ ತಳ್ಳಿದ ಈ ಕೃತ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Post a Comment