ಕೊರಗ ಸಮುದಾಯದ ವ್ಯಕ್ತಿಯನ್ನು ಜೀತಕ್ಕೆ ದುಡಿಸಿದ ಆರೋಪ : ಆರೋಪಿ ಮಹಿಳೆ ಸೆರೆ
ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ಎಂಬಲ್ಲಿ ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ಮನೆಯಲ್ಲಿ ಜೀತಕ್ಕೆ ದುಡಿಸಿ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಹೆಮ್ಮಾಡಿ ಕಬೈಲು ಉಳಿಯಾರ ನಿವಾಸಿ ಕರುಣಾಕರ ಶೆಟ್ಟಿ ಎಂಬವರ ಪತ್ನಿ ರಜನಿ ಶೆಟ್ಟಿ ಬಂಧಿತ ಆರೋಪಿ. ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ರಜನಿ ಶೆಟ್ಟಿ ಮತ್ತು ಅವರ ಅಳಿಯ ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿಕೊಂಡಿದ್ದರು. ಇವರು ನಾಗ ಅವರಿಂದ ದನ, ಎಮ್ಮೆ, ಸೆಗಣಿ ತೆಗೆಯುವುದು, ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು.
ಇವರು ನಾಗ ಅವರನ್ನು 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು ಎಂದು ದೂರಲಾಗಿದೆ. ನಾಗ ಅವರಿಗೆ ಸಂಬಳ ಕೊಡದೆ ಮನೆಯಿಂದ ಹೊರಗಡೆ ಹೋಗಲು ಬಿಡದೆ ದೌರ್ಜನ್ಯ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ ಆರೋಪಿ ಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಸ್ತುತ ಆರೋಪಿ ಮಂಗಳೂರು ಜಿಲ್ಲಾ ಕಾರಾ ಗೃಹದಲ್ಲಿದ್ದಾರೆ ಎಂದು ತಿಳಿದುಬಂದಿದೆ. ನೊಂದ ವ್ಯಕ್ತಿ ನಾಗ ಅವರನ್ನು ಮುಂದಿನ ಪುರ್ನವಸತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ್, ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ಕುಂದಾಪುರ ಉಪ ತಹಶೀಲ್ದಾರರು, ಹಟ್ಟಿಯಂಗಡಿ ಗ್ರಾಪಂನ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment