ಧರ್ಮಸ್ಥಳ: ಬಂಗ್ಲೆಗುಡ್ಡೆ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆ
ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡೆ ಎಂಬಲ್ಲಿ ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವೊಂದು ಏಪ್ರಿಲ್ 6ರಂದು ಮಧ್ಯಾಹ್ನ ಪತ್ತೆಯಾಗಿದೆ.
ಸೋಮವಾರ ಮಧ್ಯಾಹ್ನ ಸುಮಾರು 1:30ರ ವೇಳೆಗೆ ಬಂಗ್ಲೆಗುಡ್ಡೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಪಾಸಣೆ ನಡೆಸಿದಾಗ, ಪೊದೆಗಳ ನಡುವೆ ಮೃತದೇಹವಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಮೃತದೇಹವು ಪೂರ್ಣ ಪ್ರಮಾಣದಲ್ಲಿ ಕೊಳೆತ ಸ್ಥಿತಿಯಲ್ಲಿದ್ದು, ವ್ಯಕ್ತಿಯು ಮೃತಪಟ್ಟು ಹಲವು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಧರ್ಮಸ್ಥಳ ಪೊಲೀಸರು ಸ್ಥಳದಲ್ಲೇ ಮಹಜರು ಪ್ರಕ್ರಿಯೆಯನ್ನು ಪೂರೈಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಗುರುತಿನ ಚೀಟಿ ಅಥವಾ ಡೆತ್ ನೋಟ್ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯ ಪ್ರಕರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತಿಳಿಯಲು ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಮೃತರ ಗುರುತು ಈವರೆಗೆ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದು, ಇತ್ತೀಚಿನ ದಿನಗಳಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತರ ಬಗ್ಗೆ ಮಾಹಿತಿ ಇರುವವರು ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Post a Comment