".

Header Ads

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ

 


ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತದ ನಡುವೆಯೇ ದೇಶದ ರಾಜಧಾನಿಯಲ್ಲಿ ಇಂಧನ ದರಗಳು ಮತ್ತೆ ಏರಿಕೆಯಾಗಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪ್ರೀಮಿಯಂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

ಉನ್ನತ ಶ್ರೇಣಿಯ ಕಾರುಗಳು ಮತ್ತು ಸೂಪರ್ ಬೈಕ್‌ಗಳಿಗೆ ಬಳಸಲಾಗುವ ‘XP100’ (100-ಆಕ್ಟೇನ್) ಪೆಟ್ರೋಲ್ ಬೆಲೆ ಲೀಟರ್‌ಗೆ ₹149 ರಿಂದ ₹160 ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಎಕ್ಸ್‌ಟ್ರಾ ಗ್ರೀನ್ ಪ್ರೀಮಿಯಂ ಡೀಸೆಲ್ ಬೆಲೆಯು ಲೀಟರ್‌ಗೆ ₹91.49 ರಿಂದ ₹92.99 ಕ್ಕೆ ಏರಿಕೆಯಾಗಿದೆ. ಆದರೆ, ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಹೋಟೆಲ್ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ಕಳೆದ ಒಂದು ತಿಂಗಳ ಅವಧಿಯಲ್ಲಿ ₹300 ಕ್ಕೂ ಹೆಚ್ಚು ಏರಿಕೆಯಾಗಿದೆ. ಮಾರ್ಚ್ 1 ರಂದು ₹1,768.50 ಇದ್ದ ಸಿಲಿಂಡರ್ ಬೆಲೆ ಈಗ ₹2,078.50 ಕ್ಕೆ ತಲುಪಿದೆ. ಜನವರಿ 1, 2026 ರಿಂದೀಚೆಗೆ ಇದು ಐದನೇ ಬಾರಿ ನಡೆದ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಗೆ ತೈಲ ಕಂಪನಿಗಳು ಅಧಿಕೃತ ಕಾರಣ ನೀಡಿಲ್ಲವಾದರೂ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳೇ ಈ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ವಿಮಾನಯಾನ ಇಂಧನ (ATF) ದರಗಳಲ್ಲೂ ಅಲ್ಪಾವಧಿಯ ಏರಿಳಿತ ಕಂಡುಬಂದಿದೆ.

ಮಾರ್ಚ್ 27 ರಂದು ಕೇಂದ್ರ ಸರ್ಕಾರವು ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹10 ರಷ್ಟು ಕಡಿತಗೊಳಿಸಿತ್ತು. ಈ ಕ್ರಮವು ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರುತ್ತಿದ್ದರೂ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ತಡೆಯಲು ಸಹಾಯ ಮಾಡಿದೆ. ಆದರೆ, ವಾಣಿಜ್ಯ ಎಲ್‌ಪಿಜಿ ದರ ಏರಿಕೆಯು ಹೋಟೆಲ್ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡುವ ಆತಂಕ ಮೂಡಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಉಂಟಾಗಿರುವ ಭಾರಿ ಏರಿಳಿತ ಹಾಗೂ ಮಧ್ಯಪ್ರಾಚ್ಯದ ಭೌಗೋಳಿಕ ಸಂಘರ್ಷಗಳ ಹಿನ್ನೆಲೆಯಲ್ಲಿ, ಪ್ರಮುಖ ಖಾಸಗಿ ತೈಲ ಕಂಪನಿಯಾದ ‘ಶೆಲ್’ (Shell) ತನ್ನ ಇಂಧನ ದರಗಳನ್ನು ಗಣನೀಯವಾಗಿ ಹೆಚ್ಚಳ ಮಾಡಿದೆ. ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹7 ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆಯ ₹25 ರಷ್ಟು ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.

ಕಳೆದ 15 ದಿನಗಳ ಅವಧಿಯಲ್ಲಿ ಶೆಲ್ ಕಂಪನಿಯು ಮೂರನೇ ಬಾರಿಗೆ ದರ ಪರಿಷ್ಕರಣೆ ಮಾಡಿದ್ದು, ಸರ್ಕಾರಿ ಸ್ವಾಮ್ಯದ ಬಂಕ್‌ಗಳಿಗಿಂತಲೂ (HPC, BPC, IOCL) ಇಲ್ಲಿನ ದರಗಳು ಈಗ ಗಣನೀಯವಾಗಿ ಹೆಚ್ಚಿವೆ. ಬೆಂಗಳೂರಿನಲ್ಲಿ ಶೆಲ್ ಪೆಟ್ರೋಲ್ ದರ ಈಗಾಗಲೇ ಪ್ರತಿ ಲೀಟರ್‌ಗೆ ಸುಮಾರು ₹112 ರ ಗಡಿ ದಾಟಿದೆ. ಖಾಸಗಿ ಬಂಕ್‌ಗಳಲ್ಲಿ ದರ ದುಬಾರಿಯಾದ ಹಿನ್ನೆಲೆಯಲ್ಲಿ, ಹೆಚ್ಚಿನ ವಾಹನ ಸವಾರರು ಈಗ ಸರ್ಕಾರಿ ಸ್ವಾಮ್ಯದ ಬಂಕ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ ಕಂಡುಬರುತ್ತಿದೆ.

Powered by Blogger.