ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಪೋಷಕರು ಬೈದಿದ್ದಕ್ಕೆ ಅತ್ಮಹತ್ಯೆಗೆ ಯತ್ನಿಸಿದ ಬಾಲಕಿ!
ಇತ್ತೀಚೆಗೆ ಮಕ್ಕಳು ಸಣ್ಣ ಸಣ್ಣ ವಿಷಯಕ್ಕೆ ಬೇಸರಗೊಂಡು ಸಾಯುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿ ಬಾಲಕಿಯೊಬ್ಬಳು ತನ್ನ ಪೋಷಕರು, ಮೊಬೈಲ್ ನೋಡುವುದು ಬಿಟ್ಟು ಸ್ನಾನ ಮಾಡು ಎಂದು ಬೈದಿದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ಘಟನೆ ನಡೆದಿದ್ದು ತೆಲಂಗಾಣದಲ್ಲಿ, ಸ್ವರ್ಣಲತಾ ಮತ್ತು ಪೋಚಿರಾಮ್ ದಂಪತಿಯ ಮಗಳು ಸಾತ್ವಿಕಾ(17) ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ. ಈಕೆ ಇಂಟರ್‌ಮೀಡಿಯೇಟ್(ಪಿಯುಸಿ) ಮೊದಲ ವರ್ಷ ಮುಗಿಸಿ ದ್ವಿತೀಯ ವರ್ಷಕ್ಕೆ ಕಾಲಿಟ್ಟಿದ್ದಾಳೆ.
ಬುಧವಾರ(ಮೇ 20) ಸಾತ್ವಿಕಾ ಮನೆಯಲ್ಲಿ ಸ್ನಾನ ಮಾಡದೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು. ಇದನ್ನು ಕಂಡ ಪೊಷಕರು, ಆಕೆಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಹೋಗಿ ಸ್ನಾನ ಮಾಡುವಂತೆ ಗದರಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಈಕೆ ಮನೆಯ ಹೊರಗಿದ್ದ ಬಾವಿಗೆ ಜಿಗಿದಿದ್ದಾಳೆ. ಬಳಿಕ ಜೀವಭಯ ಶುರುವಾಗಿದ್ದು, ಈಕೆಯ ಕಿರುಚಾಟ ಕೇಳಿದ ತಕ್ಷಣ ಕಾಲೋನಿ ನಿವಾಸಿಗಳು ನೆರವಾಗಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿದರು. ಸಮಯಪ್ರಜ್ಞೆ ಮೆರೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು, ಬಾಲಕಿಗೆ ಲೈಫ್ ಜಾಕೆಟ್ ಧರಿಸಿ, ಆಕೆಯನ್ನು ಅತ್ಯಂತ ಸುರಕ್ಷಿತವಾಗಿ ಬಾವಿಯಿಂದ ಹೊರಗೆ ತಂದಿದ್ದಾರೆ.
ಬಾವಿಗೆ ಹಾರಿದ ರಭಸಕ್ಕೆ ಬಾಲಕಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ಲುಲ್ಲಕ ವಿಷಯಕ್ಕೆ ಪ್ರಾಣ ಕಳೆದುಕೊಳ್ಳಲು ಮುಂದಾದ ಬಾಲಕಿಗೆ ಪೊಲೀಸರು ಬುದ್ದಿವಾದ ಹೇಳಿ ಕೌನ್ಸೆಲಿಂಗ್ ನಡೆಸಿದ್ದಾರೆ.

Post a Comment