".

Header Ads

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವದಹನ!

 


ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ, ಒಂದೇ ಕುಟುಂಬದ ನಾಲ್ವರು ಸಜೀವದಹನವಾಗಿರುವ ದೃತಿಗೆಡಿಸುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಗುರುವಾರ ಬೆಳಗ್ಗೆ, ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ವಾಹನದಲ್ಲಿ ದಿಢೀರನೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಾರಿಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮಾಜಿ ಸರಪಂಚ್ ರಾಮಸಿಂಗ್ ಚೌಧರಿ ಅವರು ತಮ್ಮ ಅನಾರೋಗ್ಯ ಪೀಡಿತ ತಾಯಿ ಮತ್ತು ಜಿಲ್ಲಾ ಪರಿಷತ್ ಸದಸ್ಯೆ ಪುಸಿ ದೇವಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಸಂಪೂರ್ಣವಾಗಿ ಜಾಮ್ ಆಗಿದೆ. ಇದರಿಂದಾಗಿ ಕಾರಿನ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗದೆ, ಒಳಗಿದ್ದವರು ಹೊರಬರಲಾರದೆ ಸಿಲುಕಿಕೊಂಡಿದ್ದಾರೆ. ಕ್ಷಣಮಾತ್ರದಲ್ಲಿ ಇಡೀ ಕಾರು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ನಾಲ್ವರೂ ಒಳಗಡೆಯೇ ಸಜೀವದಹನವಾಗಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬೊರಾಡಾ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಾದರೂ, ಅಷ್ಟರಲ್ಲೇ ಕಾರು ಸಂಪೂರ್ಣ ಭಸ್ಮವಾಗಿತ್ತು. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Powered by Blogger.