".

Header Ads

26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ..!

 


26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಧರ್ಮಸ್ಥಳದ ಬಾಲಕನೊಬ್ಬ ಇಂದು ವಯಸ್ಕನಾಗಿ ಮರಳಿ ತಾಯಿಯ ಮಡಿಲು ಸೇರಿರುವ ಅಪರೂಪದ ಘಟನೆ  ನಡೆದಿದೆ. ಬಾಲ್ಯದಲ್ಲಿ ಸರ್ಕಸ್ ತಂಡದೊಂದಿಗೆ ತೆರಳಿದ್ದ ಈ ವ್ಯಕ್ತಿ ಇದೀಗ ಹೊಸ ಗುರುತಿನೊಂದಿಗೆ ಕುಟುಂಬವನ್ನು ಮತ್ತೆ ಸೇರಿದ್ದಾನೆ.

ಧರ್ಮಸ್ಥಳದ ಅಶೋಕನಗರ ನಿವಾಸಿ ಸತೀಶ್, 2000ನೇ ಇಸವಿಯಲ್ಲಿ ಕೇವಲ 12 ವರ್ಷದ ಬಾಲಕನಾಗಿದ್ದಾಗ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿ ಅವರೊಂದಿಗೆ ಊರು ಬಿಟ್ಟು ಹೋಗಿದ್ದನು. ನಂತರ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದನು.

ಕಾಲಕ್ರಮೇಣ ತನ್ನ ಕುಟುಂಬ, ಊರು ಹಾಗೂ ಮಾತೃಭಾಷೆಯಾದ ಕನ್ನಡ ಮತ್ತು ತುಳುವನ್ನೂ ಮರೆತಿದ್ದ ಸತೀಶ್, ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸ ಬಂದಿದ್ದ ಸಂದರ್ಭದಲ್ಲಿ ಹಳೆಯ ನೆನಪುಗಳು ಮರುಕಳಿಸಿವೆ.

ಅದೇ ಸರ್ಕಸ್ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ತನ್ನ ಬಾಲ್ಯದ ನೆನಪುಗಳು ಸ್ಪಷ್ಟವಾಗಿದ್ದು, “ಇದೇ ನನ್ನ ಊರು” ಎಂಬ ಅರಿವು ಮೂಡಿದೆ. ನಂತರ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿ ಕೊನೆಗೂ ತನ್ನ ಕುಟುಂಬವನ್ನು ಪತ್ತೆಹಚ್ಚಿದ್ದಾನೆ. 

ಮಹಾರಾಷ್ಟ್ರದಲ್ಲಿ ಆತ ಸಲೀಂ ಅಬ್ದುಲ್ ಅನ್ಸಾರಿ ಎಂಬ ಹೆಸರಿನಿಂದ ಜೀವನ ನಡೆಸುತ್ತಿದ್ದು, ಅಲ್ಲಿ ವಿವಾಹವಾಗಿದ್ದು ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ.   ಕಳೆದ 26 ವರ್ಷಗಳಿಂದ ತಾಯಿ ಮಗನಿಗಾಗಿ ನಿರಂತರವಾಗಿ ಪ್ರಾರ್ಥನೆ, ಹರಕೆ ಹಾಗೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರು.ಇತ್ತೀಚೆಗೆ ತೀವ್ರ ಅನಾರೋಗ್ಯದಲ್ಲಿದ್ದ ತಾಯಿ, ಮಗನನ್ನು ನೋಡಬೇಕೆಂಬ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. ತನ್ನ ಪ್ರಾರ್ಥನೆ ಫಲಿಸಿದೆ ಎಂದು ಸತೀಶ್ ನ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. 

Powered by Blogger.