ಆಡುತ್ತಿದ್ದಾಗಲೇ ಹೃದಯಾಘಾತ; ಆಡಲು ಬಂದ ವೈದ್ಯರಿಂದ ಉಳಿಯಿತು ವ್ಯಕ್ತಿಯ ಜೀವ
ಆಟದ ಮೈದಾನದಲ್ಲಿ ಕುಸಿದು ಬಿದ್ದು ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯೊಬ್ಬರು, ವೈದ್ಯರಿಬ್ಬರ ಸಮಯೋಚಿತ ನಿರ್ಧಾರ ಮತ್ತು ತುರ್ತು ಚಿಕಿತ್ಸೆಯಿಂದ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ದೀಪಕ್ ಪೂಜಾರ(45) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಇವರು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ಕ್ರೀಡಾಂಗಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೇ ಆಟದ ಮೈದಾನಕ್ಕೆ ವಿರಾಮದ ಅವಧಿಯಲ್ಲಿ ಬ್ಯಾಡ್ಮಿಂಟನ್ ಆಡಲು ಬಂದಿದ್ದ ಡಾ. ಗರ್ಗ್ ಮತ್ತು ಡಾ. ಶರ್ಮಾ ಎಂಬ ಇಬ್ಬರು ವೈದ್ಯರು, ಅಲ್ಲಿ ಲಭ್ಯವಿದ್ದ ತುರ್ತು ವೈದ್ಯಕೀಯ ಕಿಟ್ ಮೂಲಕ ದೀಪಕ್ ಅವರಿಗೆ ಪ್ರಾಥಾಮಿಕ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದ್ದರಿಂದ ಸಿಪಿಆರ್ ನೀಡಿದ್ದಾರೆ.ಆದರೆ ಅವರ ದೇಹದಲ್ಲಿ ಸುಧಾರಣೆ ಕಾಣದಿದ್ದಾಗ ಡಿಫಿಬ್ರಿಲೇಟರ್ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ ಶಾಕ್ ನೀಡಿದ್ದಾರೆ. ಈ ವೇಳೆ ದೀಪಕ್ ಅವರ ದೇಹದಲ್ಲಿ ಕೊಂಚ ಬದಲಾವಣೆ ಕಂಡಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಇಬ್ಬರು ವೈದ್ಯರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Post a Comment