ಮಳೆಗಾಲದಲ್ಲಿ ರಸ್ತೆ ಹೊಂಡದಿಂದ ಪ್ರಾಣ ಹಾನಿಯಾದರೆ ಇಂಜಿನಿಯರ್‌ಗಳೇ ನೇರ ಹೊಣೆ: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ!
ಮಳೆಗಾಲದ ಅವಧಿಯಲ್ಲಿ ರಸ್ತೆಗಳಲ್ಲಿ ನೀರು ನಿಂತು ಅಥವಾ ಹೊಂಡ-ಗುಂಡಿಗಳಿಂದಾಗಿ ಯಾವುದೇ ರಸ್ತೆ ಅಪಘಾತ ಸಂಭವಿಸಿ ಸಾರ್ವಜನಿಕರ ಪ್ರಾಣ ಹಾನಿಯಾದರೆ ಅದಕ್ಕೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತೀವ್ರ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಳೆಗಾಲದ ಪೂರ್ವಸಿದ್ಧತೆ ಹಾಗೂ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಎಲ್ಲೂ ನೀರು ನಿಲ್ಲದಂತೆ ತಕ್ಷಣವೇ ಸೂಕ್ತ ಕ್ರಮ ಜರುಗಿಸಬೇಕು. ಕೇವಲ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ತೇಪೆ ಕೆಲಸ ಮಾಡುವ ಬದಲು ದೀರ್ಘಕಾಲ ಬಾಳಿಕೆ ಬರುವ ಶಾಶ್ವತ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಎದುರಾಗುವ ಯಾವುದೇ ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಇಲಾಖೆಯ ನಿಯಮಗಳ ವ್ಯಾಪ್ತಿ ಮೀರಿ ಸಾರ್ವಜನಿಕ ಹಿತಾಸಕ್ತಿಯಿಂದ ತ್ವರಿತವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಪರಸ್ಪರ ಸಮನ್ವಯತೆಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಳೆಗಾಲದ ಸಮಯದಲ್ಲಿ ಉಂಟಾಗುವ ವಿದ್ಯುತ್ ವ್ಯತ್ಯಯ ಹಾಗೂ ಲೈನ್ ಕಡಿತದ ಸಮಸ್ಯೆಗಳನ್ನು ನಿವಾರಿಸಲು ಮೆಸ್ಕಾಂ (MESCOM) ವ್ಯಾಪ್ತಿಯಲ್ಲಿ ಹೆಚ್ಚುವರಿ ಲೈನ್‌ಮ್ಯಾನ್‌ಗಳು ಹಾಗೂ ಅಗತ್ಯ ವಾಹನಗಳನ್ನು ಒದಗಿಸಬೇಕು. ಬಿರುಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದ ತಕ್ಷಣವೇ ಪರ್ಯಾಯ ಮಾರ್ಗಗಳ ಮೂಲಕ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮಳೆಗಾಲದಲ್ಲಿ ಎದುರಾಗುವ ಮಾನವ ನಿರ್ಮಿತ ಸಮಸ್ಯೆಗಳನ್ನು ಶೂನ್ಯಕ್ಕಿಳಿಸಲು ಸ್ಥಳೀಯ ಸಂಸ್ಥೆಗಳು ತಕ್ಷಣ ಗಮನಹರಿಸಬೇಕು. ನೆರೆಯಿಂದ ರಸ್ತೆ ತಡೆ ಉಂಟಾದರೆ ವಿಳಂಬ ಮಾಡದೆ ತಕ್ಷಣವೇ ಮರಗಳನ್ನು ತೆರವುಗೊಳಿಸಬೇಕು. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ತುರ್ತು ಸೇವೆಗಾಗಿ ಟಾಸ್ಕ್‌ಫೋರ್ಸ್‌ಗಳನ್ನು ಸಕ್ರಿಯಗೊಳಿಸಬೇಕು. ಪರಿಹಾರ ಕಾರ್ಯಗಳನ್ನು ಹಮ್ಮಿಕೊಳ್ಳುವಾಗ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಖಾದರ್ ಸೂಚಿಸಿದರು.

Post a Comment