".

Header Ads

ಕಾರ್ಕಳ: ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದುರ್ಘಟನೆ, ಕಸಕ್ಕೆ ಬೆಂಕಿ ಹಚ್ಚುವ ವೇಳೆ ಬೆಂಕಿ ದುರಂತ ಐವರು ವಿದ್ಯಾರ್ಥಿಗಳಿಗೆ ಗಾಯ

ಶಾಲೆಯ ಆವರಣದೊಳಗೆ ಕಸಕ್ಕೆ ಬೆಂಕಿ ಹಾಕುತ್ತಿದ್ದ ವೇಳೆ ಏಕಾಎಕಿ ನಿಗೂಢ ಸ್ಪೋಟದಿಂದ ಐವರು ವಿದ್ಯಾರ್ಥಿಗಳಿಗೆ ಸುಟ್ಟಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಶಾಲೆ ಆರಂಭಕ್ಕೆ ಮುನ್ನ ಸ್ವಚ್ಚತಾ ಕಾರ್ಯ ನಡೆದಿದ್ದು, ಸಂಗ್ರಹಿಸಿದ ಕಸವನ್ನು ವಿದ್ಯಾರ್ಥಿಗಳು ಒಂದೆಡೆ ಸುರಿದು ಬೆಂಕಿ ಹಚ್ಚುವ ವೇಳೆ ಕಸದ ರಾಶಿಯಲ್ಲಿ ಏಕಾಎಕಿ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಪಕ್ಕದಲ್ಲಿದ್ದ ಐವರು ವಿದ್ಯಾರ್ಥಿಗಳಿಗೆ ಬೆಂಕಿ ತಗುಲಿದೆ. 7 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸೇರಿ 5 ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾಗಿದ್ದು,ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದ ಸುಟ್ಟಗಾಯಗಳಾಗಿದ್ದರೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ದುರಂತದಲ್ಲಿ 7ನೇ ತರಗತಿ ವಿದ್ಯಾರ್ಥಿಗಳಾದ ಸಂಸ್ಕೃತ್ (12) , ಗಗನ್ (12) ಹೃತ್ವಿಕ್(12) ಹಾಗೂ ಅದ್ವಿನ್(11) ಎಂಬವರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳು ವಿದ್ಯಾರ್ಥಿಗಳು ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯ ದಯಾನಂದ ನಾಯಕ್ ಅವರ ಸೂಚನೆ ಮೇರೆಗೆ ದೈಹಿಕ ಶಿಕ್ಷಣ ಶಿಕ್ಷಕ ಶಾಲಾ ತರಗತಿ ಕೊಠಡಿಗಳ ಸ್ವಚ್ಚತಾ ಕಾರ್ಯವನ್ನು ವಿದ್ಯಾರ್ಥಿಗಳಿಂದ ಮಾಡಿಸಿದ್ದು, ಬಳಕ ಸಂಗ್ರಹವಾದ ಕಸಕ್ಕೆ ಬೆಂಕಿ ಹಾಕುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಈ ಕಸದಲ್ಲಿ ಜಿರಳೆಗಳಿಗೆ ಸಿಂಪಡಿಸುವ ಹಿಟ್ ಎನ್ನುವ ಕೆಮಿಕಲ್ ಟಿನ್ ಸೇರಿಕೊಂಡಿದ್ದು, ಕಸಕ್ಕೆ ಹಾಕಿದ್ದ ಬೆಂಕಿಯು ಟಿನ್ ಗೆ ತಗುಲಿ ಅದು ಸ್ಪೋಟವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. 

 ಸರ್ಕಾರಿ ಶಾಲೆಯಲ್ಲಿ ಇಂತಹ ದುರ್ಘಟನೆ ಸಂಭವಿಸಿದ ಕುರಿತು ಪೋಷಕರು ಆತಂಕಗೊ0ಡಿದ್ದು, ಗಾಯಾಳು ವಿದ್ಯಾರ್ಥಿಗಳ ಹೆತ್ತವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಕ್ಕಳ ಕೈಯಲ್ಲಿ ಸ್ವಚ್ಚತೆ ಮಾಡಿಸಿ ಕಸ ವಿಲೇವಾರಿ ಮಾಡಿಸಿದ ಶಾಲಾ ಮುಖ್ಯೋಪಾಧ್ಯಾಯರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Powered by Blogger.