ಚಂಡಮಾರುತ ಎಫೆಕ್ಟ್ : ಮುಂದಿನ 4 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ವಾಯು ಚಂಡಮಾರುತ ಹಾಗೂ ಮೇಲ್ಮೈ ಗಾಳಿಯ ಪರಿಚಲನೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 3ರಿಂದ 4 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಸಮುದ್ರ ಮಟ್ಟದಲ್ಲಿ ಮಾನ್ಸೂನ್ ತಗ್ಗು ಪ್ರದೇಶವು ಶ್ರೀ ಗಂಗಾನಗರ, ರೋಹ್ಟಕ್, ಶಹಜಹಾನ್‌ಪುರ, ಸುಲ್ತಾನ್‌ಪುರ, ಗಯಾ, ಬಂಕುರಾ ಮಾರ್ಗವಾಗಿ ಮಿಜೋರಾಂ ಕಡೆಗೆ ಚಲಿಸುತ್ತಿದೆ. ಜೊತೆಗೆ ದಕ್ಷಿಣ ತಮಿಳುನಾಡು-ಪುದುಚೇರಿ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನ ವಾಯುಮಂಡಲದಲ್ಲಿ (ಸಮುದ್ರ ಮಟ್ಟದಿಂದ 5.8 ರಿಂದ 7.6 ಕಿ.ಮೀ ಎತ್ತರದಲ್ಲಿ) ಮೇಲ್ಮೈ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಈ ವಾತಾವರಣದ ಬದಲಾವಣೆಗಳಿಂದಾಗಿ ರಾಜ್ಯದೆಲ್ಲೆಡೆ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲೂ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸಾರ್ವಜನಿಕರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
Post a Comment