ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ಕೀ ಉತ್ತರ ಪ್ರಕಟ: ಆಗಸ್ಟ್ 6ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತವಾಗಿ ಬಿಡುಗಡೆ ಮಾಡಿದೆ. 2026ರ ಆಗಸ್ಟ್ 2ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆದ ಸಾಮಾನ್ಯ ಜ್ಞಾನ ಪತ್ರಿಕೆಯ ಕೀ ಉತ್ತರಗಳನ್ನ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳಿಗಾಗಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್.ಪ್ರಸನ್ನ ಐಎಎಸ್ ಅವರು ತಿಳಿಸಿದ್ದಾರೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೂಡಲೇ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.ಪ್ರಕಟಿಸಲಾದ ತಾತ್ಕಾಲಿಕ ಕೀ ಉತ್ತರಗಳಲ್ಲಿ ಅಭ್ಯರ್ಥಿಗಳಿಗೆ ಯಾವುದಾದರೂ ಪ್ರಶ್ನೆಯ ಉತ್ತರಗಳ ಬಗ್ಗೆ ಗೊಂದಲ ಅಥವಾ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಪ್ರಶ್ನಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವಕಾಶ ಕಲ್ಪಿಸಿದೆ. ಒಂದು ವೇಳೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಇದ್ದರೆ, ಪ್ರಾಧಿಕಾರದ ಅಧಿಕೃತ ಆನ್‌ಲೈನ್ ಪೋರ್ಟಲ್ https://cetonline.karnataka.gov.in/kea/ ಮೂಲಕವೇ ತಮ್ಮ ಆಕ್ಷೇಪಣೆಗಳನ್ನ ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 6, ಬೆಳಿಗ್ಗೆ 10:30ರವರೆಗೆ ಅಂತಿಮ ಗಡುವು ನಿಗದಿಪಡಿಸಲಾಗಿದ್ದು, ನಿಗದಿತ ಸಮಯದ ನಂತರ ಬರುವ ಯಾವುದೇ ಮನವಿಗಳನ್ನ ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಆಕ್ಷೇಪಣೆ ಸಲ್ಲಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳು ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹಾಗೆಯೇ ಆಕ್ಷೇಪಣೆಗಳನ್ನ ದಾಖಲಿಸುವಾಗ ಈ ಕೆಳಗಿನ ವಿವರಗಳನ್ನ ಕಡ್ಡಾಯವಾಗಿ ನಮೂದಿಸಬೇಕು:
1. ಪರೀಕ್ಷೆಯ ವಿವರ ಮತ್ತು ಪರೀಕ್ಷೆ ನಡೆದ ದಿನಾಂಕ (02.08.2026). 2. ಅಭ್ಯರ್ಥಿಯ ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ (Version Code) ಹಾಗೂ ನಿರ್ದಿಷ್ಟ ಪ್ರಶ್ನೆ ಸಂಖ್ಯೆ. 3. ಆಕ್ಷೇಪಣೆಗೆ ಪೂರಕವಾದ ಹಾಗೂ ಅಧಿಕೃತವಾದ ಆಧಾರ ಅಥವಾ ದಾಖಲೆಗಳನ್ನ ಕಡ್ಡಾಯವಾಗಿ PDF ರೂಪದಲ್ಲಿ ಮಾತ್ರ ಅಪ್‌ಲೋಡ್ ಮಾಡಬೇಕು. 4. ಪ್ರಶ್ನೆ ಸಂಖ್ಯೆ ಮತ್ತು ವರ್ಷನ್ ಕೋಡ್ ನಮೂದಿಸದಿದ್ದಲ್ಲಿ, ಅಥವಾ ಯಾವುದೇ ಪೂರಕ ದಾಖಲೆಗಳಿಲ್ಲದೆ ಸಲ್ಲಿಸುವ ಆಧಾರರಹಿತ ಆಕ್ಷೇಪಣೆಗಳನ್ನ ಪ್ರಾಧಿಕಾರ ತಿರಸ್ಕರಿಸುತ್ತದೆ. ತಜ್ಞರ ಸಮಿತಿ ಅಂತಿಮ ನಿರ್ಧಾರ ಪ್ರತಿ ಆಕ್ಷೇಪಣೆಗೆ ಅಭ್ಯರ್ಥಿಗಳು 25 ರೂಪಾಯಿ ಶುಲ್ಕವನ್ನ ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯವಾಗಿದೆ. ನಿಗದಿತ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನ ಪರಿಶೀಲನೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ಒಮ್ಮೆ ಪಾವತಿಸಿದ ಶುಲ್ಕವನ್ನ ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಎಲ್ಲಾ ಆಕ್ಷೇಪಣೆಗಳು ಮತ್ತು ಪೂರಕ ದಾಖಲೆಗಳನ್ನ ವಿಷಯ ತಜ್ಞರ ಸಮಿತಿಯು ಸಂಪೂರ್ಣವಾಗಿ ಪರಿಶೀಲಿಸಲಿದೆ. ತಜ್ಞರ ಸಮಿತಿಯು ನೀಡುವ ಅಂತಿಮ ವರದಿಯ ಆಧಾರದ ಮೇಲೆ ಅಂತಿಮ ಕೀ ಉತ್ತರಗಳನ್ನ ಸಿದ್ಧಪಡಿಸಲಾಗುತ್ತದೆ ಹಾಗೂ ಅದೇ ಅಂತಿಮ ನಿರ್ಧಾರವಾಗಿರುತ್ತದೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳು ಮತ್ತು ಮುಂದಿನ ಅಪ್‌ಡೇಟ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಅನ್ನ ನಿರಂತರವಾಗಿ ಗಮನಿಸುತ್ತಿರಲು ಸಲಹೆ ನೀಡಲಾಗಿದೆ.

Post a Comment