ಕರ್ನಾಟಕ ರಾಜಕೀಯದಲ್ಲಿ ಸಂಚಲನ: ಶಾಸಕಾಂಗ ಹುದ್ದೆಗಳಿಗೆ ಹೊಸ ಮುಖಗಳು
ರಾಜ್ಯ ರಾಜಕೀಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ವಿಧಾನಸಭೆಯ ಸಭಾಧ್ಯಕ್ಷ, ಉಪಸಭಾಧ್ಯಕ್ಷ ಹಾಗೂ ವಿಧಾನಪರಿಷತ್‌ನ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳಿಗೆ ಹೊಸಬರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಅನುಮೋದನೆ ನೀಡಿದೆ. ಸಂಪುಟ ಪುನಾರಚನೆ ಹಾಗೂ ರಾಜೀನಾಮೆಗಳಿಂದ ತೆರವಾದ ಪ್ರಮುಖ ಸಾಂವಿಧಾನಿಕ ಸ್ಥಾನಗಳಿಗೆ ಹೈಕಮಾಂಡ್ ಅಂತಿಮ ಮುದ್ರೆ ಒತ್ತಿದೆ.
ನೂತನ ನೇಮಕಾತಿಗಳ ವಿವರ:-
ಪ್ರಮುಖ ಹುದ್ದೆಗಳು ಮತ್ತು ನೂತನ ಅಭ್ಯರ್ಥಿಗಳ ವಿವರ:
ವಿಧಾನಸಭಾಧ್ಯಕ್ಷರು (Speaker)- ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್
ವಿಧಾನಸಭೆ ಉಪಸಭಾಧ್ಯಕ್ಷರು (Deputy Speaker)- ಶಾಸಕ ಎ.ಎಸ್. ಪೊನ್ನಣ್ಣ
ವಿಧಾನಪರಿಷತ್ ಸಭಾಪತಿಗಳು (Chairman)- ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್
ವಿಧಾನಪರಿಷತ್ ಉಪಸಭಾಪತಿಗಳು (Deputy Chairman- ಮಾಜಿ ಸಚಿವೆ ಉಮಾಶ್ರೀ
ತೆರವಾದ ಹುದ್ದೆಗಳ ಹಿನ್ನೆಲೆ:-
ಇದುವರೆಗೆ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಉಪಸಭಾಧ್ಯಕ್ಷರಾಗಿದ್ದ ರುದ್ರಪ್ಪ ಮಾನಪ್ಪ ಲಮಾಣಿ ಕೂಡ ಇಂದು ಸಂಜೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಕಾರಣದಿಂದ ವಿಧಾನಸಭೆಯ ಉಭಯ ಪ್ರಮುಖ ಸ್ಥಾನಗಳು ತೆರವಾಗಿದ್ದವು.
ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಮುಖ ನ Aಗರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹಳೆ ಮೈಸೂರು ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸೇರಿದವರಾಗಿರುವುದರಿಂದ, ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಮತ್ತು ಸಲೀಂ ಅಹಮದ್ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಅಲ್ಲದೆ, ಯು.ಟಿ. ಖಾದರ್ ಅವರು ನಿರ್ಗಮಿಸಿದ ಅದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಲೀಂ ಅಹಮದ್ ಅವರಿಗೆ ಸಭಾಪತಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ. ಉಪಸಭಾಪತಿಯಾಗಲಿರುವ ಉಮಾಶ್ರೀಯವರೂ ಕೂಡ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ.
ಸ್ಪೀಕರ್ ಆಯ್ಕೆಯಲ್ಲಿ ಅಚ್ಚರಿಯ ತಿರುವು:-
ಸಂಪುಟ ವಿಸ್ತರಣೆ ಮತ್ತು ಹುದ್ದೆಗಳ ಬದಲಾವಣೆ ಕುರಿತು ಚರ್ಚೆಗಳು ನಡೆದಾಗ, ವಿಧಾನಸಭಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಭರ್ಜರಿಯಾಗಿ ಚಲಾವಣೆಯಲ್ಲಿದ್ದವು.
ಆದರೆ, ಹೈಕಮಾಂಡ್ ಬಿಡುಗಡೆ ಮಾಡಿರುವ ಅಂತಿಮ ಪಟ್ಟಿಯಲ್ಲಿ ಈ ಹಿರಿಯ ನಾಯಕರ ಹೆಸರುಗಳಾವುವೂ ಇಲ್ಲದೆ, ಅಚ್ಚರಿಯೆಂಬಂತೆ ಜಿ.ಎಸ್. ಪಾಟೀಲ್ (ಇವರು ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ್ ಅವರ ಹತ್ತಿರದ ಸಂಬಂಧಿ) ಅವರ ಹೆಸರು ಮುಂಚೂಣಿಗೆ ಬಂದಿದೆ. ಈ ಅನಿರೀಕ್ಷಿತ ಬದಲಾವಣೆಯು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಯುವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಹಳೆಯ ಮುಖಗಳಿಗೆ ಮಣೆಹಾಕಿದ್ದು, ಮೂವರನ್ನು ಹೊರತುಪಡಿಸಿದರೆ ಬಹುತೇಕ ಉಳಿದ ಎಲ್ಲರೂ 50 ವರ್ಷ ದಾಟಿದವರಾಗಿದ್ದಾರೆ.
ಕೆ.ಎಚ್.ಮುನಿಯಪ್ಪ 78ವರ್ಷ ದಾಟಿದ್ದು, ಸಂಪುಟದಲ್ಲೇ ಅತ್ಯಂತ ಹಿರಿಯರಾಗಿದ್ದಾರೆ. ಒಂಭತ್ತು ಬಾರಿ ಸಂಸದರಾಗಿದ್ದವರು ಇದೇ ಮೊದಲ ಬಾರಿ ದೇವನಹಳ್ಳಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೆ.ಜೆ.ಜಾರ್ಜ್ ನಂತರದಲ್ಲಿ ಹಿರಿಯರಾಗಿದ್ದು ಅವರಿಗೆ 77ವರ್ಷವಾಗಿದೆ. ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್ 75ವರ್ಷ. ಸಚಿವರಾದ ರಾಮಲಿಂಗಾರೆಡ್ಡಿ-73, ಪುಟ್ಟರಂಗ ಶೆಟ್ಟಿ -72, ಬಸವರಾಜ ರಾಯರೆಡ್ಡಿ-70 ವರ್ಷದ ವಯೋಮಾನದವರಾಗಿದ್ದಾರೆ.
ಉಳಿದಂತೆ ಕೆ.ಎಂ.ಶಿವಲಿಂಗೇಗೌಡ (68), ರುದ್ರಪ್ಪ ಲಮಾಣಿ (67), ಈಶ್ವರ ಖಂಡ್ರೆ (64), ಸತೀಶ್ ಜಾರಕಿಹೊಳಿ (64), ಡಿ.ಕೆ.ಶಿವಕುಮಾರ್ (64), ಪಿ.ಎಂ.ನರೇಂದ್ರಸ್ವಾಮಿ (63), ಟಿ.ರಘುಮೂರ್ತಿ (63), ಗಾಯತ್ರಿ ಶಾಂತಗೌಡ (63), ಎಂ.ಬಿ.ಪಾಟೀಲ್ (62), ಎಚ್.ಸಿ.ಬಾಲಕೃಷ್ಣ (61), ಜಮೀರ್ ಅಹಮದ್ ಖಾನ್ (60), ಮಧುಬಂಗಾರಪ್ಪ 60 ವರ್ಷದವರಾಗಿದ್ದಾರೆ.
ಎಸ್.ಎಸ್.ಮಲ್ಲಿಕಾರ್ಜುನ್ (59), ಶರಣಪ್ರಕಾಶ್ ಪಾಟೀಲ್ (59), ಯು.ಟಿ.ಖಾದರ್ (57), ಕೆ.ಎಸ್.ಬಸಂತಪ್ಪ (57), ಲಕ್ಷ್ಮಣ ಸವದಿ (56), ಶಿವರಾಜ ತಂಗಡಗಿ (55), ಬಿ.ನಾಗೇಂದ್ರ (55), ವಿಜಯಾನಂದ ಕಾಶಪ್ಪನವರ್ (54), ಬೈರತಿ ಸುರೇಶ್ (54), ಮಂಕಾಳ ವೈದ್ಯ (54), ಕೃಷ್ಣಭೈರೇಗೌಡ (53), ಅಜಯ್ ಸಿಂಗ್ (52), ಸಂತೋಷ್ ಲಾಡ್ 51ವರ್ಷದವರು.
ಪ್ರಿಯಾಂಕ್ ಖರ್ಗೆ (48), ರಿಜ್ವಾನ್ ಅರ್ಷದ್ (47), ಯತೀಂದ್ರ ಸಿದ್ದರಾಮಯ್ಯ 46 ವರ್ಷದವರಾಗಿದ್ದು, ಸಂಪುಟದಲ್ಲಿ ಕಿರಿಯರು ಎನಿಸಿಕೊಂಡಿದ್ದಾರೆ.
ಸಚಿವರ ಆಯ್ಕೆ ಅವಧಿ:
ಇನ್ನು ಮೊದಲ ಬಾರಿ ಆಯ್ಕೆಯಾಗಿರುವ ಪೈಕಿ ಮೂವರಿಗೆ ಮಾತ್ರ ಅವಕಾಶ ಸಿಕ್ಕಿದೆ. ಪ್ರದೀಪ್ ಈಶ್ವರ್, ದರ್ಶನ್ ದೃವನಾರಾಯಣ್ ಮೊದಲ ಬಾರಿ ಆಯ್ಕೆಯಾಗಿದ್ದರೂ, ಸಂಪುಟ ಸೇರುವ ತವಕದಲ್ಲಿದ್ದರು.
ಎಂಟು ಬಾರಿ ಶಾಸಕರಾಗಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, ರಾಮಲಿಂಗಾರೆಡ್ಡಿ ಸಚಿವರಾಗಿದ್ದಾರೆ. ಆರನೇ ಬಾರಿ ಶಾಸಕರಾಗಿರುವ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದು, ಬಸವರಾಜರಾಯರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್ ಸಚಿವರಾಗಿದ್ದಾರೆ.
ಐದನೇ ಅವಧಿಗೆ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ, ಯು.ಟಿ.ಖಾದರ್, ಜಮೀರ್ ಅಹಮದ್ ಖಾನ್, ನಾಲ್ಕನೇ ಬಾರಿ ಶಾಸಕರಾಗಿರುವ ಚೆಲುವರಾಯ ಸ್ವಾಮಿ, ಈಶ್ವರ್ ಖಂಡ್ರೆ, ಲಕ್ಷ್ಮಣ ಸವದಿ, ಎಸ್.ಎಸ್.ಮಲ್ಲಿಕಾರ್ಜುನ್, ಬಿ.ನಾಗೇಂದ್ರ, ಪುಟ್ಟಣ್ಣ ಶೆಟ್ಟಿ, ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ, ಕೆ.ಎಂ.ಶಿವಲಿಂಗೇಗೌಡ, ಶರಣ ಪ್ರಕಾಶ್ ಪಾಟೀಲ್ ಸಂಪುಟದಲ್ಲಿದ್ದಾರೆ.
ಮೂರನೇ ಬಾರಿ ಶಾಸಕರಾಗಿರುವ ಅಜಯ್ ಧರ್ಮಸಿಂಗ್, ಪಿ.ಎಂ.ನರೇಂದ್ರಸ್ವಾಮಿ, ಪ್ರಿಯಾಂಕ ಖರ್ಗೆ, ರಘುಮೂರ್ತಿ, ಶಿವರಾಜ್ ತಂಗಡಗಿ, ಎರಡನೇ ಬಾರಿ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ್, ಮಧುಬಂಗಾರಪ್ಪ, ರಿಜ್ವಾನ್ ಅರ್ಷದ್, ಬಿ.ಎಸ್.ಬೈರತಿ ಸುರೇಶ್, ಮೊದಲ ಬಾರಿ ಶಾಸಕರಾಗಿರುವ ಕೆ.ಎಸ್.ಬಸವಂತಪ್ಪ, ಕೆ.ಎಚ್.ಮುನಿಯಪ್ಪ, ಒಮೆ ಶಾಸಕರಾಗಿ ಈಗ ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ, ಸಚಿವರಾಗಿದ್ದಾರೆ.

Post a Comment